ನಾನು ಈಗಷ್ಟೇ ಬಾಚಿಕೊಂಡ ಬಾಚಣಿಗೆಯನ್ನು ನೋಡಿದೆ . ಒಂದು ಅರ್ಧ ನಿಮಿಷ ಬಾಚಿ ಕೊಂಡಿರಬಹುದೇನೋ ಅದಾಗಲೇ ಬಾಚಣಿಗೆಯಲ್ಲಿ ರಥದ ಚಕ್ರದ ಅಡಿಗೆ ಸಿಕ್ಕಿ ಸತ್ತ ಸೈನಿಕರಂತೆ ಒಂದಿಷ್ಟು ಸಿಕ್ಕಿಹಾಕಿಕೊಂಡಿದ್ದವು . ಕನ್ನಡಿಯ ಮುಂದೆ ಒಂದಿಷ್ಟು . ರೂಮನ್ನು ಮತ್ತೊಮ್ಮೆ ನೋಡಿದೆ ಎಲ್ಲೆಂದರಲ್ಲಿ ಅನಾಥ ಶವಗಳಂತೆ ತಲೆಯಿಂದ ಉದುರಿ ಬಿದ್ದಿರುವ ,ಈಗಷ್ಟೇ ಉದುರಿ ಬೀಳುತ್ತಿರುವ ಬಹುಷಃ ಇನ್ನು ಮುಂದೆ ಉದುರಿ ಬೀಳಲು ಇರದೇ ಹೋಗುವ ಕೂದಲುಗಳೇ ಕಾಣಿಸುತ್ತಿವೆ . ಏನು ಮಾಡುವುದು ಎಂಬುದು ತೋಚದೆ ಅಲ್ಲೇ ದೊಪ್ಪೆಂದು ಕುಳಿತೆ . ಏನನ್ನಿಸಿತೋ ಎನೋ ಎದ್ದು ,ತಕ್ಷಣ ಕಸ್ಪರಿಕೆಯನ್ನು ತೆಗದು ಇಡೀ ಕೋಣೆಯನ್ನು ಗುಡಿಸಿದೆ . ಸುಮಾರು ದಿನಗಳಿಂದ ನನ್ನ ಕೋಣೆಯನ್ನು ಸ್ವಚ್ಚವಾಗಿ ಇಟ್ಟುಕೊಳ್ಳಲು ಇದೇ ಕಾರಣವಿರಬಹುದು . ಇಲ್ಲದೆ ಇದ್ದಲ್ಲಿ ಮಂಡಿಪೇಟೆಯಲ್ಲಿ ಮಂಗಳವಾರ ಸಂತೆ ಮುಗಿದ ಮೇಲೆ ಇರುವಷ್ಟು ಗಲೀಜು ನನ್ನ ಕೋಣೆಯಲ್ಲಿ ಇರುತಿತ್ತು . ಆದರೆ ಈಗ ಕೆಲವು ದಿನಗಳಿಂದ ನ್ಯೂ ಯಾರ್ಕ್ ಮೇನ್ ರೋಡ್ ನಂತೆ ಫಳ ಫಳ ಹೊಳೆಯುತ್ತಿದೆ . ಗುಡಿಸಿದ ಮೇಲೆ ಕಸವನ್ನು ಒಟ್ಟು ನೋಡಿದರೆ ಅದರಲ್ಲಿ ಬಹು ಪಾಲು ಕೂದಲುಗಳೇ ಇವೆ .
ಮತ್ತೆ ಬಂದು ಕನ್ನಡಿ ಮುಂದೆ ನಿಂತೆ .ನನ್ನನ್ನೇ ನಾನು ನೋಡಿಕೊಂಡೆ .ಮುಖವನ್ನು ಕನ್ನಡಿಯ ಹತ್ತಿರ ಹೋಗಿ ನೋಡಿಕೊಂಡೆ . ಹಣೆಯ ಮೇಲ್ಭಾಗದ ಎಡ ಹಾಗೂ ಬಲ ತುದಿ ಅದಾಗಲೇ ಹುಲ್ಲುಗಳು ಇಲ್ಲದ ದಾರಿಗಳಂತೆ ಆಗಲು ಶುರು ವಾಗಿದೆ . ತಲೆಯ ಮೇಲ್ಭಾಗದಲ್ಲೂ ಮೊದಲಿದ್ದಷ್ಟು ಕೂದಲುಗಳು ಇಲ್ಲ . ತಲೆಯ ಹಿಂಭಾಗ ಕಾಣಿಸುತ್ತಿಲ್ಲ . ತಕ್ಷಣ ಉಪಾಯವೊಂದು ,ಹೊಳೆದು ಮೊಬೈಲ್ ತೆಗದು ಕೊಂಡೆ . ನನ್ನ ತಲೆಯ ಹಿಂಭಾಗ ದ ಚಿತ್ರ ತೆಗದು ನೋಡಿದರೆ ಅಲ್ಲಿ ಅದಾಗಲೇ 30-40 ಸೈಟು . ತುಂಬಾ ದಿನದಿಂದ ಸೈಟು ತೆಗದು ಕೊಳ್ಳಬೇಕೆಂಬ ಅಸೆ ಇತ್ತು . ದೇವರು ಹೀಗೆ ಆ ಆಸೆಯನ್ನು ತೀರಿಸುತ್ತಿದ್ದಾನೆ ಅನ್ನಿಸಿತು . ಆಗ ತಕ್ಷಣ ನನ್ನ ಭವಿಷ್ಯದ ರೂಪ ಮತ್ತೆ ಕನ್ನಡಿಯಲ್ಲಿ ಕಾಣಿಸಿತು . ಅದಕ್ಕೆ ತಲೆಯಲ್ಲಿ ಕೂದಲೇ ಇಲ್ಲ . " ಎಷ್ಟು ಗುಡಿಸಿದರೇನು ?ಮತ್ತೆ ಮತ್ತೇ ಅವುಗಳು ಉದುರಿಯೇ ಉದುರುತ್ತವೆ . ನೀನು ನನ್ನಂತೆ ಆಗಿಯೇ ಆಗುತ್ತೀಯಾ?" ಎಂದು ಹೇಳುತ್ತಾ ಗಹಿಗಹಿಸಿ ನಗುತ್ತಿದೆ . ನನಗೆ ಹೆದರಿಕೆ ಆಗ ತೊಡಗಿತು . ಪರ್ಸ್ , ಮೊಬೈಲ್ ತೆಗದು ಕೊಂಡು , ಚಪ್ಪಲಿ ಹಾಕಿಕೊಂಡು ಹೊರಗಡೆ ಹೊರಟೆ .
ಅದೇನೋ ಗೊತ್ತಿಲ್ಲಾ ನಂಗೆ ಮೊದಲಿನಿಂದಲೂ ಕೂದಲ ಬಗ್ಗೆ ವ್ಯಾಮೋಹ . ಬಾಲ್ಡಿ ತಲೆಗಳನ್ನು ನೋಡಿದರೆ ನಗು ಬರುತಿತ್ತು . ಆದರೆ ಅದಕ್ಕಿಂತ ತುಂಬಾ ಹೆದರಿಕೆಯಾಗುತ್ತಿತ್ತು ಕೂಡ . ಎಲ್ಲಿ ,ನಾನು ಅವರಂತೆ ಆಗಿಬಿಡುತ್ತೀನೋ ಎಂದು . ನನಗೆ ತಲೆ ತುಂಬಾ ಕೂದಲು ಅಂದರೆ ಸೌಂದರ್ಯದ ಪ್ರತೀಕ . ಅದು ಇಲ್ಲದವರು ಹಾಸ್ಯದ ಪ್ರತೀಕಗಳು ಎಂಬುದು ನನ್ನ ಅನಿಸಿಕೆ ಯಾಗಿತ್ತು . ಅಮ್ಮ ಯಾವಾಗಲೂ ಹೇಳುತ್ತಿದಳು . ಚಿಕ್ಕವನಿದ್ದಾಗ ಯಾರೋ ಬಾಲ್ಡಿ ಅಂಕಲ್ ನನ್ನ ತಲೆ ಮೇಲೆ ಕೈ ಅಲ್ಲಾಡಿಸುತ್ತ ಹೇಳಿದ್ದರಂತೆ " ಪುಟ್ಟ ಈಗ ಒಳ್ಳೆ ಕೂದಲು ಕಾಡು ಥರಹ ಬೆಳೆದಿದೆ . ಮುಂದೆ ನನ್ನ ಥರ ಆಗುತ್ತೀಯ ಆಗ ಏನು ಮಾಡುತ್ತೀಯ ? " ಅಂತ . ಅಷ್ಟಕ್ಕೇ ನಾನು ಹೆದರಿ ಗೊಳೋ ಎಂದು ಅತ್ತು ಕರೆದು . ತುಂಬಾ ದಿನಗಳು ಅವರನ್ನು ಮಾತನಾಡಿಸುವುದೇ ಬಿಟ್ಟಿದ್ದೆ ಅಂತೆ . ಆ ಅಂಕಲ್ ಕಣ್ಣು ಹಾಕಿದ್ದರ ಫಲವೇನೋ ನನಗೆ ಈಗ ಕೂದಲು ಉದುರುತ್ತಿದೆ ಅನ್ನಿಸಿತು .
ಅಷ್ಟೇ ಅಲ್ಲಾ ಶಾಲೆಯಲ್ಲಿ ಕೂದಲು ಉದುರುವುದು ವಂಶವಾಹಿ ಸಮಸ್ಯೆಗಳಲ್ಲಿ ಒಂದು ನನಗೆ ಪುಸ್ತಕ ದಲ್ಲಿ ಓದಿದಾಗ ಹೆದರಿಕೆ ಯಾಗಿತ್ತು . ಹಲವಾರು ಅವಿಷ್ಕಾರಗಳಂತೆ ಅದು ಸುಳ್ಳು ಇರಬಹುದು ಅಥವಾ ಸುಳ್ಳಾಗಿರಲಿ ಎಂದು ದೇವರ ಹತ್ತಿರ ಪ್ರಾರ್ಥಿಸುತ್ತಿದೆ . ಅಷ್ಟೇ ಏಕೆ ಉತ್ತರ ಪತ್ರಿಕೆಯಲ್ಲಿ ವಂಶವಾಹಿ ಸಮಸ್ಯೆಗಳು ಗುರುತಿಸಿ ಪ್ರಶ್ನೆಗೆ ಅದೊಂದನ್ನು ಬಿಟ್ಟು ಎಲ್ಲಾ ಬರೆದಿದ್ದೆ .ಯಾಕಂದರೆ ಮನೆಯಲ್ಲಿ ಅಪ್ಪನಿಗೆ ಅದಾಗಲೇ ಕೂದಲು ಉದುರುವುದು ಶುರುವಾಗಿತ್ತು . ಎಲ್ಲಿ ನನಗೂ ಮುಂದೆ ಹಾಗೆ ಆಗುತ್ತದೆಯೋ ಎನ್ನುವ ಹೆದರಿಕೆ . ಕಾಲೇಜಿನಲ್ಲಿ ಅದಾಗಲೇ ಕೂದಲು ಉದುರಿದ್ದ ಗೆಳಯನನ್ನು ನಾವೆಲ್ಲಾ ಸಿಕ್ಕ ಪಟ್ಟೆ ಗೋಳು ಹೊಯ್ದುಕೊಳ್ಳುತ್ತಿದ್ದೆವು . ಮೊಟ್ಟೆ , ಕುಂಬಳ ಕಾಯಿ , ಸೊನ್ನೆ ಹೀಗೆ ಯಾವುದೇ ದುಂಡಗಿನ ವಸ್ತು ಸಿಕ್ಕಿದರೆ ಸಾಕು ಅವನ ಮುಖದ ಪಕ್ಕ ಇಟ್ಟು ನಗುತ್ತಿದ್ದೆವು . ಅವನ ಶಾಪ ಏನಾದರು ನನ್ನ ಕೂದಲು ಮೇಲೆ ಪ್ರಭಾವ ಬೀರುತ್ತಿದೆಯಾ ಅನ್ನಿಸಿತು .
ದಾರಿಯಲ್ಲಿ ಹೋಗುತ್ತಾ ಹೀಗೆ ಅನೇಕ ಯೋಚನೆಗಳು ನನ್ನನ್ನು ಕಾಡ ತೊಡಗಿದವು . ಅಯ್ಯೋ !ಯೋಚನೆ ಮಾಡಿದರೆ ಕೂದಲು ಉದುರುತ್ತವೆ ಅಂತ ಎಲ್ಲಿಯೋ ಓದಿದ್ದು ನೆನಪು . ಯೋಚನೆ ಮಾಡುವುದು ನಿಲ್ಲಿಸಬೇಕು . ಆದರೆ ಹೇಗೆ ?ಆಗ ಮತ್ತೊಂದು ಯೋಚನೆ ಹುಟ್ಟಿಕೊಂಡಿತು . ಅಯ್ಯೋ ಮತ್ತೆ ಎಷ್ಟು ಕೂದಲು ಕಳೆದುಕೊಂಡೆನೋ ಎಂಬ ಮತ್ತೊಂದು ಯೋಚನೆ . ಹೀಗೆ ಒಂದಾದರ ಮೇಲೊಂದು ಯೋಚನೆಗಳ ಸುಳಿಯಲ್ಲಿ ಸಿಕ್ಕಿ ನನ್ನ ಕೂದಲುಗಳು ಉದುರುತ್ತಿವೆ ಅನ್ನಿಸಿತು .
ಬಸ್ ಬರುವ ಜಾಗ ಬಂದದ್ದರಿಂದ ಅಲ್ಲಿಯೇ ನಿಂತುಕೊಂಡೆ . ಆ ಸಣ್ಣ ನಿಲ್ದಾಣದಲ್ಲಿ ಕುಳಿತಿಕೊಳ್ಳಲು ನಾಲ್ಕೈದು ಕಲ್ಲಿನ ಬೆಂಚು ಗಳಿದ್ದವು . ಖಾಲಿಯಿದ್ದ ಬೆಂಚೊಂದರಲ್ಲಿ ಕುಳಿತು ಬಸ್ ಗೆ ಕಾಯುತ್ತಾ ರಸ್ತೆ ನೋಡುತ್ತಾ ಕುಳಿತೆ . ರಸ್ತೆ ಯಲ್ಲಿ ಚೆನ್ನಾಗಿರುವ ಹುಡುಗಿಯರನ್ನು ಬಿಟ್ಟು ,
ಹೋಗಿ ಬರುವ ಜನರಲ್ಲಿ ಎಷ್ಟು ಜನ ಬಾಲ್ಡಿಗಳು ಇದ್ದಾರೆ ಎಂದು ನೋಡುತ್ತಿದೆ . ಹತ್ತರಲ್ಲಿ ಐದು ಜನ ಬಾಲ್ದಿಗಳೇ . ಕೆಲವರಿಗೆ ಮುಂದೆ ಕೂದಲು ಇಲ್ಲ .ಕೆಲವರಿಗೆ ಹಿಂದೆ ಇಲ್ಲ . ಕೆಲವರಿಗೆ ಪೂರ್ತಿ ಇಲ್ಲ . ಇವರೆಲ್ಲಾ ನಾನು ಮುಂದೆ ಸೇರುವ ಸಂಘದ ಸದಸ್ಯರು ಅನ್ನಿಸಿತು . ರಸ್ತೆಯ ಇನ್ನೊಂದು ಬದಿ ಆ ಕಡೆಯಿಂದ ಬರುವ ಬಸ್ ಗೆ ಕಾಯುತ್ತ ಒಂದಿಷ್ಟು ಜನ ನಿಂತಿದ್ದರು . ಅದರಲ್ಲಿ ಒಬ್ಬ ಹುಡುಗನ ಸುತ್ತ ನಾಲ್ಕೈದು ಚೆಂದದ ಹುಡುಗಿಯರು ಮಾತನಾಡುತ್ತ ನಗುತ್ತ ನಿಂತಿದ್ದರು . ಸಾಮಾನ್ಯವಾಗಿ ಇಂತಹ ದೃಶ್ಯ ನೋಡಿದಾಗ ನನಗೆ ಅಸೂಯೆ ಮೂಡುತಿತ್ತು . ಆದರೆ ಇಂದು ಹೆದರಿಕೆ ಆಯಿತು . ಯಾಕಂದ್ರೆ ಆ ಗುಂಪಿನ ಪಕ್ಕ ದಲ್ಲಿ ಒಬ್ಬ ವ್ಯಕ್ತಿ ನಿಂತಿದ್ದ . ಬೋಳು ತಲೆಯವನು . ಒಬ್ಬನೇ ನಿಂತಿದ್ದಾನೆ . ಬಹುಶಃ ಅದಕ್ಕೆ ಅವನ ಬೋಳು ತಲೆಯೇ ಕಾರಣವಾ ? ಮತ್ತಷ್ಟು ಹೆದರಿಕೆ ಆಗಿ ಅಲ್ಲಿ ನೋಡುವುದನ್ನು ನಿಲ್ಲಿಸಿ ಪಕ್ಕಕೆ ಮುಖ ತಿರುಗಿಸದೆ .
ಆಲ್ಲಿಯೇ ನಿಂತಿದ್ದ ಅಂಕಲ್ ಒಬ್ಬ ನನ್ನನು ನೋಡಿ ಸ್ಮೈಲ್ ಕೊಟ್ಟರು . ನನಗೇಕೋ ವಿಚಿತ್ರ ಅನ್ನಿಸಿತು . ನಾನು ಸಾಮಾನ್ಯವಾಗಿ ಇಲ್ಲಿ ಬಸ್ ಗೆ ಕಾಯುವಾಗ ಆ ಅಂಕಲ್ ನನ್ನು ತುಂಬಾ ಸಲ ನೋಡಿದ್ದೇನೆ . ಅವರು ಸಾಮಾನ್ಯವಾಗಿ ಇಲ್ಲಿಯೇ ಬಸ್ ಗೆ ಕಾಯುವುದು . ಆದರೆ ಯಾವತ್ತು ಮುಖಕ್ಕೆ ಮುಖ ಎದುರಾದಾಗ ನಕ್ಕಿದವರಲ್ಲ . ಇವತ್ತು ಯಾಕೆ ನಕ್ಕಿದರು ಅನ್ನುವುದು ಪ್ರಶ್ನೆ . ಯಾಕಂದೆರೆ ಆ ಅಂಕಲ್ ಬೋಳು ತಲೆಯವರಾಗಿದ್ದರು . ಅವರಿಗೆ ನನ್ನ ಕೂದಲು ಉದುರುತ್ತಿರುವುದು ಗೊತ್ತಗಿರಬಹುದೇನೋ ? ನಮ್ಮ ಸಂಘಕ್ಕೆ ಸ್ವಾಗತ , ನೀನು ನಮ್ಮ ಸಂಘದ ಸದಸ್ಯ ಇಷ್ಟರಲ್ಲೇ ಆಗುತ್ತೀಯ ಎಂದು ಸ್ವಾಗತಿಸುವ ಮಂದಹಾಸ ಅದಾಗಿತ್ತ ಎಂಬ ಪ್ರಶ್ನೆ ಹುಟ್ಟ ತೊಡಗಿತು . ನನಗೆ ಆ ಮನುಷ್ಯ ಅಖಿಲ ಭಾರತ ಬೋಳು ಸಂಘದ ಅಧ್ಯಕ್ಷನಂತೆ ಕಂಡ . ಇಲ್ಲ ನಾನು ಹಾಗಾಗಬಾರದು . ಏನಾದ್ರೂ ಮಾಡಲೇ ಬೇಕು . ಎಲ್ಲ ಸಮಸ್ಯೆಗೆ ಪರಿಹಾರ ಇದ್ದೇ ಇದೆ . ಹೋಗು ಹುಡುಕು , ಮನಸಿದ್ದಲ್ಲಿ ಮಾರ್ಗ . ಹುಡುಕು ಹುಡುಕು .ಏಳು ಎದ್ದೇಳು ಗುರಿ ಮುಟ್ಟುವ ತನಕ ನಿಲ್ಲದಿರು ಎಂಬ ಘೋಷ ವಾಕ್ಯಗಳು ನನ್ನ ಕಿವಿಗೆ ಕೇಳಿಸತೊಡಗಿದವು .
ಬಸ್ ಗೆ ಕಾಯುವುದನ್ನು ಬಿಟ್ಟು ಎದ್ದು ನಿಂತೆ . ನಾನು ಹೋಗಬೇಕಾದ ಸ್ಥಳ ಅದಲ್ಲ . ಬೇರೆಯದೇ ಇದೆ ಎಂದು ನಡೆಯಲು ಶುರು ಮಾಡಿದೆ . ತಕ್ಷಣ ಮೊಬೈಲ್ ನಲ್ಲಿ ಕೂದಲು ಉದುರುವಿಕೆಗೆ ಪರಿಹಾರ ಏನು ಎಂಬುದು ಅಂತರ್ಜಾಲದಲ್ಲಿ ಹುಡುಕಿದೆ . ಒಂದು ೧೦ ಸೆಕೆಂಡುಗಳಲ್ಲಿ ಸಾವಿರ ಫಲಿತಾಂಶಗಳು ಬಂದವು .ಒಂದೊಂದೇ ತೆರದು ನೋಡಿದೆ . ಎಲ್ಲ ಜಾಹೀರಾತುಗಳಲ್ಲಿ ಒಂದು ನನ್ನ ಕಣ್ಣು ಕುಕ್ಕಿತು . ಆ ಜಾಹೀರಾತಿನಲ್ಲಿ ಬೋಳು ತಲೆಯೊಬ್ಬ ವ್ಯಕ್ತಿ ಚಿಕಿತ್ಸೆಯ ನಂತರ ಉಪೇಂದ್ರನ ತರಹ ಆಗಿದ್ದನು . ಇದೇ ಸರಿ ಯಾದ ಜಾಗ ನನಗೆ ಅನ್ನಿಸಿತು . ಎಷ್ಟು ಖರ್ಚು ಆಗಬಹುದು ಎಂದು ಅಲ್ಲಿಯೇ ಕೆಳಗೆ ನೋಡಿದೆ . ಹತ್ತರಿಂದ ಒಂದು ಲಕ್ಷ ಅಂತ ಬರೆದಿತ್ತು .ಕೋಟಿ ಖರ್ಚು ಆಗಲಿ ಬಿಡುವುದಿಲ್ಲಾ ಎಂದು ಪರ್ಸ್ ಗೆ ಕೈ ಹಾಕಿದೆ . ಹತ್ತು ರುಪಾಯಿ ಐವತ್ತು ಪೈಸೆ ಇತ್ತು . ಛೇ !ದುಡ್ಡು ಜೋಡಿಸ ಬೇಕು ಎಂದು ಪರ್ಸ್ ಮಡಿಚಿ ಇಟ್ಟುಕೊಳ್ಳುವಾಗ ಮತ್ತೆರಡು ಕೂದಲು ಉದುರಿ ಹೆಗಲ ಮೇಲೆ ಬಿದ್ದಿದ್ದು ಕಾಣಿಸಿತು . ಹಾಗೆ ನಡೆದು ಕೊಂಡು ಹೋಗುತ್ತಿದ್ದವನು ಮತ್ತದೇ ಬಸ್ ನಿಲ್ದಾಣದಲ್ಲಿ ನಿಂತ ಅಂಕಲ್ ನೋಡಿದೆ . ಅವರು ನನ್ನನು ನೋಡಿ ಮತ್ತೆ ಮಂದಹಾಸ ಬೀರಿದರು .
ಮತ್ತಷ್ಟು ಜೋರಾಗಿ ನಡೆಯಲು ಆರಂಭಿಸಿದೆ . ಎಲ್ಲಿಗೆ ಎಂದು ನನಗೆ ಗೊತ್ತಿಲ್ಲಾ . ಬಹುಷಃ ಬರಿ ತಲೆ ತುಂಬಾ ಕೂದಲು ತುಂಬಿರುವ ಆ ಜಗತ್ತಿನೆಡೆಗೆ . ನಡೆಯುವಾಗೆಲ್ಲಾ ಒಂದೇ ಒಂದು ಪ್ರಶ್ನೆ ನನ್ನ ಸದಾ ಕಾಡ ತೊಡಗಿತು . ಅದೇನೆಂದರೆ ಈ ಕೂದಲು ಬೇಡ ಬೇಡ ಅಂದರು ಬೇಡದ ಕಡೆ ಬೆಳದು ಬೇಕು ಬೇಕು ಎಂದರು ಬೇಕಾಗಿರುವ ಕಡೆ ಯಾಕೆ ಬೆಳೆಯುದಿಲ್ಲವಲ್ಲ ಯಾಕೆ ?
ಸೂಚನೆ : ಈ ಲೇಖನದಲ್ಲಿ ಯಾರ ಮನಸ್ಸಿಗೂ ನೋವುಂಟು ಮಾಡುವ ಉದ್ದೇಶ ನನಗಿಲ್ಲ . ನನ್ನ ತಲೆಯಲ್ಲಿನ ಕೂದಲು ಉದುರುತ್ತಿರುವ ಸಮಸ್ಯೆಗೆ ಹಾಗೆ ಹಾಸ್ಯ ಲೇಪಿಸಿ ಬರೆಯುತ್ತಿದೇನೆ . ಇದು ಬರೀ ಹಾಸ್ಯಕ್ಕೆ ಮಾತ್ರ . ಕೂದಲು ಇಲ್ಲದವರು ಓದಿ ದಯವಿಟ್ಟು ಶಾಪ ಹಾಕದಿರಿ . ಈ ಲೇಖನ ಬರೆಯುವ ಹೊತ್ತಿಗೆ ಅದಾಗಲೇ ನನ್ನ ಹತ್ತು ಕೂದಲು ಉದುರಿವೆ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ