ಗುರುವಾರ, ಏಪ್ರಿಲ್ 25, 2013

ಇನ್ನೂ ಸಿಗದ ಕನಸಿನ ರಾಣಿಗೊಂದು ಪ್ರೇಮಪತ್ರ



"ಶ್ರವಣ್ ನೋಡ್ತಾ ಇರು,ತಡವಾಗಿ ಸಿಕಿದ್ರು ಥೇಟ್ ನಿನ್ನ ರಾಜಕುಮಾರಿ ಇದ್ದ ಹಾಗೆ ಇರ್ತಾಳೆ " ಅಂತ ಅದೆಷ್ಟು ಗೆಳತಿಯರು ಸಮಾಧಾನ ಮಾಡಿಲ್ಲಾ ?. "ಬಂಗಾರದಂತ ಹೆಣ್ಣ ಮಗುನಾ ಮದುವೆ ಯಾಗಿ ,ಮನೆ ತುಂಬಾ ಮೊಮ್ಮಕ್ಳು ,ಅಪ್ಪ ಅಪ್ಪ ಅಮ್ಮನಿಗೆ ಕೊಡಪ್ಪಾ "ಅಂತ ಅದೆಷ್ಟು ನೆಂಟರು , ಅಜ್ಜ ಅಜ್ಜಿ ತಲೆ ಸವರಿ ಸವರಿ ಆಶೀರ್ವಾದ ಮಾಡಿಲ್ಲಾ?.
          ಆದರೆ ಇಷ್ಟೆಲ್ಲಾ ಹಾರೈಕೆ ,ಆಶೀರ್ವಾದಗಳ ನಡುವೆಯೂ ನನಗೆ ಅವರು ಹೇಳುವ ಆ ಹುಡುಗಿ ,ಅದೇ ನನ್ನ ಕನಸಿನ ರಾಣಿ ಅರ್ಥಾತ್ ನೀನೆ ನನ್ನ ಮನದರಸಿ ಇನ್ನು ನನಗೆ ಸಿಕ್ಕಿಯೇ ಇಲ್ಲ . ಅದಕ್ಕೆ ಏನೋ ಈ ಹುಡುಗಿ ನನ್ನ ಕನಸಿನ ಹುಡುಗಿ ಇರಬಹುದಾ ಅಥವಾ ಆ ಹುಡುಗಿ ನನ್ನ ಮನದರಾಣಿ ಇರಬಹುದಾ ಅಂತ ಸದಾ ನನ್ನ ಪ್ರೀತಿಯ ಹುಡುಕಾಟದಲ್ಲಿ ಇರುತ್ತೇನೆ .
        ನೀ ಅದೆಲ್ಲಿದಿಯೋ ?ನನಗೆ ಯಾವಾಗ ಸಿಗುತ್ತಿಯೋ ? ನನ್ನ ಮನದ ಸಿಂಹಾಸನವನ್ನು ಯಾವಾಗ ಅಲಂಕರಿಸುತ್ತೀಯೋ?ಗೊತ್ತಿಲ್ಲ . ಅದರೆ ಒಂದಲ್ಲಾ ಒಂದು ದಿನ ನನ್ನ ಜೀವನದಲ್ಲಿ ಪ್ರೀತಿ ಸಿಗುತ್ತೆ ಅಂದುಕೊಂಡಿರುವ ಆಶಾವಾದಿ ನಾನು .ಆ ಪ್ರೀತಿ ನನ್ನ ಪರಿಕಲ್ಪನೆಯ  ಮೂರ್ತರೂಪವೇ ಆಗಿರುತ್ತೆ ಅಂದರೆ ನೀನೇ ಆಗಿರುತ್ತೀಯಾ ಎಂಬುದು ನನ್ನ ನಂಬಿಕೆ.ಬೇರೆಯವರು ಇದನ್ನು ನಂಬಿಕೆ ಅಲ್ಲಾ ,ಇದನ್ನು ಅತಿ ಆಸೆ ಅನ್ನಬಹುದು, ಇಲ್ಲವೇ ಹುಚ್ಚು ಅಂತ ಕರೆಯಲೂಬಹುದು .ಪರವಾಗಿಲ್ಲ ಈ ಲೋಕದ ಜನರೇ ಹಾಗೆ ಕೆಲವೊಮ್ಮೆ ನಾವು ಆರು ಅಂದರೆ ಅದನ್ನು ಅವರು ಒಂಭತ್ತು ಅಂತಾರೆ .ಒಂಭತ್ತು ಅಂದಿದನ್ನು ಆರು ಅಂತಾರೆ .ಅವರ ಬಗ್ಗೆ ತಲೆ ಕೆಡಸಿ ಕೊಳ್ಳುವವನಲ್ಲ ನಾನು .ನನಗೆ ನನ್ನ ಪ್ರೀತಿ ಮೇಲೆ ಅಚಲ ವಿಶ್ವಾಸವಿದೆ .ಅದೆಕ್ಕೆ ಈ ಪೇಮ ಪತ್ರ .
       ಏನಿದು ಎಲ್ಲರೂ ಹುಡುಗಿ ಸಿಕ್ಕ ಮೇಲೆ ಪ್ರೇಮ ಪತ್ರ ಬರೆದರೆ ,ಇವನು ನನ್ನನ್ನು ಮಾತನಾಡಿಸಿಲ್ಲ ,ಭೇಟಿಯಾಗಿಲ್ಲ ನೋಡಿಲ್ಲ ಆಗಲೇ ಬರೆಯುತ್ತಿದಾನೆ ,ಇವನಿಗೇನಾದರೂ ಎರಡು ಸುತ್ತು ಕಮ್ಮಿನಾ ಅಂತ  ನೀ ಯೋಚಿಸುತ್ತಾ ಇರಬಹುದು ? .ಯಾರು ಹೇಳಿದ್ದು ನಾನು ನಿನ್ನ ನೋಡಿಲ್ಲ,ನಿನ್ನ ಮಾತನಾಡಿಸಿಲ್ಲಾ ಎಂದು ?ನಾನು ನಿನ್ನ ನೋಡಿದ್ದೇನೆ, ಮಾತನಾಡಿಸಿದ್ದೇನೆ,ಕೈ ಕೈ ಹಿಡಿದು ನಿನ್ನ ಜೊತೆ ಓಡಾಡಿದ್ದೇನೆ .ಎಲ್ಲಿ ಅಂತ ಗೊತ್ತಾಗುತ್ತಾ ಇಲ್ಲವಾ?ನಿನಗೆ ಹೇಗೆ ಗೊತ್ತಾಗುತ್ತೆ ?ನೀನೇ ನನ್ನ ಕನಸು ತುಂಬಾ ತುಂಬಿಕೊಂಡಿದ್ದರೂ ,ನನ್ನ ಕನಸಿನಲ್ಲಿ ಏನು ಆಗುತ್ತದೆ ಎನ್ನುವುದು ನನಗೆ ಮಾತ್ರ ಗೊತ್ತಾಗುತ್ತದೆ ತಾನೇ ?ಹೌದು ಹುಡುಗಿ, ನೀ ನನ್ನ ಕನಸು ಅಷ್ಟೇ ಅಲ್ಲಾ ನನ್ನ ಪ್ರತಿಯೊಂದು ಕನಸು ಕೂಡ ನೀನೆ. ನೀನು ನನ್ನ ಪ್ರತಿ ಕನಿಸಿನಲ್ಲೂ .ನೀನೇ ತುಂಬಿರುವೆ .

            ಆ ಕನಸುಗಳು ಹೇಗಿರುತ್ತೆ ಗೊತ್ತಾ ?ಅದೇ ಹಳೇ ಸಿನೆಮಾಗಳ ಹಾಡು ಥರಹ ,ಹಳೇ ಕಥೆಗಳ ಹಾಗೆ .ಅದ್ಯಾಕೋಗೊತ್ತಿಲ್ಲಾ ಅದೆಲ್ಲಾ ಕನಸುಗಳು ಶುರುವಾಗೋದು ಬರಡು ಭೂಮಿಯಲ್ಲಿ . ಆ ಬರಡು ಭೂಮಿಯಲ್ಲಿ ನಾನೊಬ್ಬ ಅಲೆಮಾರಿ . ಒಂಟಿತನ ಎಂಬ ಸೂರ್ಯನ ಬಿಸಿಲು ನನ್ನನ್ನು ಕಿತ್ತು ಕಿತ್ತು ತಿನ್ನುತ್ತಿರುತ್ತದೆ .ನನಗೆ ಕೇಳತೀರದ ದಾಹ . ಆ ದಾಹ ತೀರಲು ನನಗೆ ಪ್ರೀತಿಯೆಂಬ ನೀರು ಬೇಕು . ಆದರೆ ಅದು ಸಿಗದೇ ,ಹುಡುಕಿ ಹುಡುಕಿ ನಾನು ಅಲ್ಲೇ ತಲೆ ತಿರುಗಿ ಬೀಳುತ್ತೇನೆ .ಅಗ ಅಲ್ಲಿಗೆ ಒಂದು ಅಂದದ ಚೆಂದದ ಪಲ್ಲಕ್ಕಿ ಹೊತ್ತು ನಾಲ್ಕು ಜನ ಬರುತ್ತಾರೆ .ಆ ಪಲ್ಲಕ್ಕಿಯಲ್ಲಿ ಒಬ್ಬ ರಾಜಕುಮಾರಿ ಇರುತ್ತಾಳೆ . ನಾನು ತಲೆ ತಿರುಗಿ ಬಿದ್ದಿರುವುದನ್ನು ಅದು ಹೇಗೋ ನೋಡಿದ ಆ ರಾಜ ಕುಮಾರಿ ಸೇವಕರಿಗೆ ಹೇಳಿ ಪಲ್ಲಕ್ಕಿ ನಿಲ್ಲಿಸುತ್ತಾಳೆ .ಆಗ ಸೇವಕರು ನನ್ನ ಪರಸ್ಥಿತಿಯನ್ನು ನಿನಗೆ ವಿವರಿಸಿ ಹೇಳುತ್ತಾರೆ . ಆಗ ಆ ಪಲ್ಲಕ್ಕಿಯಿಂದ ರಾಜಕುಮಾರಿ ಕೆಳಗಿಳಿದು ಬರುತ್ತಾಳೆ . ಆ ರಾಜಕುಮಾರಿ ನೀನೆ . ಅಹ್ಹಾ ಅದೆಂಥಾ ಮಾಯೆ . ನೀನು ಕಾಲಿಟ್ಟ ಕೂಡಲೇ ಆ ಬರಡು ಭೂಮಿಯಲ್ಲಿ ಹಸಿರು ಹುಟ್ಟುತ್ತುದೆ . ಅಲ್ಲಿ ಬೀಜಗಳು ಮೊಳಕೆ ಒಡೆದು ,ಅದು ಗಿಡವಾಗಿ ಬೆಳದು ,ಹೂಗಳು ಹಣ್ಣುಗಳಿಂದ ಗಿಡಗಳ ರಂಭೆ,ಕೊಂಬೆಗಳು ಬಾಗಿ ನಿಲ್ಲುತ್ತವೆ .ನೀನು ಬಂದವಳೇ ನನ್ನ ತಲೆಯನ್ನು ನಿನ್ನ ತೊಡೆ ಮೇಲೆ ಇಟ್ಟುಕೊಂಡು ,ನಿನ್ನ ಕೈಯಾರೆ ನನಗೆ ನೀರು ಕುಡಿಸುವೆ . ಅದು ಬರಿಯ ನೀರಲ್ಲ, ಪ್ರೀತಿಯೆಂಬ ನೀರು .ನಾನು ಹಗಲಿರುಳು ಆ ಬರಡು ಭೂಮಿಯಲ್ಲಿ ಹುಡುಕುತ್ತಿದ್ದ ನೀರು . ಎರಡು ಹನಿ ನೀರು ನನ್ನೊಳಗೆ ಹೋಗುತ್ತಿದ್ದ ಹಾಗೆ ,ನನ್ನ ಆಯಾಸ ಎಲ್ಲಾ ತೀರಿ ಹೊಸ ಚೈತನ್ಯ ಮೂಡುತ್ತದೆ . ಆ ಚೈತನ್ಯದ ಮೂಲವೇ ನೀನು ಹುಡುಗಿ .
           ನಂತರ ನಾನು ನೀನು, ಕೈ ಕೈ ಹಿಡಿದು ಸುತ್ತ ಮುತ್ತಲೆಲ್ಲಾ ಓಡಾಡುತ್ತೇವೆ,ಆಟ ಆಡುತ್ತೇವೆ ,ಪ್ರೇಮ ಪಕ್ಷಿಗಳ ಹಾಗೆ . ಆ ಪ್ರೇಮಲೋಕಕ್ಕೆ ನಾನೇ ರಾಜ ನೀನೆ ರಾಣಿ .ನಮ್ಮದೇ ಅಲ್ಲಿ ಕಾರುಬಾರು .ಆದರೆ ಇಲ್ಲೊಂದು ಸಮಸ್ಯೆ ಇದೆ . ನಿನಗೆ ಅದು ಸಮಸ್ಯೆ ಥರಹ ಕಾಣದಿರಬಹುದು ಆದರೆ ನನಗೆ ಅದು ಸಮಸ್ಯೆ. ಅದೇನು ಅನದರೆ ಇಷ್ಟೆಲ್ಲಾ ಆದರೂ ಒಮ್ಮೆಯೂ ನಾನು ನಿನ್ನ ಮುಖವನ್ನು ಎಂದು ನೋಡಿಯೇ ಇಲ್ಲ .ನೀನು ನಿನ್ನ ಮುಖವನ್ನು ಸದಾ ಒಂದು ಪರದೆಯಂತಹ ಬಟ್ಟೆಯಿಂದ ಬರೀ ನಿನ್ನ ಸುಂದರ ಕಣ್ಣುಗಳು ಕಾಣುವ ಹಾಗೆ ಮುಚ್ಚಿಕೊಂಡಿರುತ್ತೀಯಾ . ಅದೇನೋ ನಾನು ಪ್ರತಿ ಸಲವೂ ಅದನ್ನು ತೆಗಯಲು ಹೋದಾಗ ಅಥವಾ ತೆಗೆಯಲು ಹೇಳಿದಾಗ ನೀನು ನಿರಾಕರಿಸುವೆ . "ಸಮಯ ಬರಲಿ" ಎಂದು ಹೇಳಿದವಳೇ ಮರುಕ್ಷಣವೇ ಪಲ್ಲಕ್ಕಿ ಏರಿ ಹೊರಟು ಬಿಡುತ್ತೀಯಾ . ನೀ ಹೋದ ಮರುಕ್ಷಣವೇ ಮತ್ತದೇ ಮರುಭೂಮಿ ,ಮತ್ತದೇ ದಾಹ , ಮತ್ತದೇ ನೀರಿಗಾಗಿ ಹುಡುಕಾಟ .
                ಅದೇನು ನಾನು ಕೇಳಬಾರದ್ದು ಕೇಳಿದೆ ,ಅಥವಾ ಅದೇನು ನಾನು ಮಾಡಬಾರದ್ದು ಮಾಡಿದೆ ?ಇಂದಿಗೂ ನನಗೆ ತಿಳುಯುತ್ತಿಲ್ಲ . ನಿನ್ನ ಮುಖ ನೋಡದೇ ಇರುವುದಕ್ಕೇನೋ ನಾನು ನಿನ್ನನ್ನು ಪ್ರತಿಕ್ಷಣ ,ಪ್ರತಿಯೊಬ್ಬ ಹುಡುಗಿಯಲ್ಲೂ ಹುಡುಕುತ್ತಿರುವುದು .ಕೆಲವೊಮ್ಮೆ ನಾನು ಯಾಕೆ ನಿನ್ನನ್ನು ಹುಡುಕುತ್ತಿರುವೆ ಎಂಬುದೇ ನಂಗೆ ಅರ್ಥ ಆಗುವುದಿಲ್ಲಾ .ಎಲ್ಲಾ ಹುಚ್ಚಾಟ ಅನ್ನಿಸುವುದು ಇದೆ .ಆದರೂ ಈ ಹುಚ್ಚಾಟದಲ್ಲೂ ಏನೋ ಸುಖವಿದೆ .
ಬಸ್ನಲ್ಲಿ ಹೋಗುವಾಗ ಪಕ್ಕದಲ್ಲೇ ನೀ ಬಂದು ಕೂರಬಹುದೇನೋ ?ಅಥವಾ ಯಾವುದೋ ರೋಡಿನಲ್ಲಿ ನೀನು ನನಗೆ ನನ್ನ ಗಾಡಿಯಲ್ಲಿ ಡ್ರಾಪ್ ಕೇಳಬಹುದೇನೋ ? ಅಥವಾ ಅಚಾನಕ್ಕಾಗಿ ನನ್ನ ಮೊಬೈಲ್ಗೆ ಕಾಲ್ ಮಾಡಿ ಹಾಗೆ ಪರಿಚಯ ಆಗಬಹುದೇನೋ,ಇಲ್ಲ ಅಂದರೆ ದಾರಿಯಲ್ಲಿ ಹೋಗುತ್ತಾ ಇರುವ ನನಗೆ ಬಂದು ಡಿಕ್ಕಿ ಹೊಡೆಯಬಹುದೇನೋ ? ಅಥವಾ ನಾನು ನೀನು ಲೈಬ್ರರಿಯಲ್ಲಿ ಇರುವ ಒಂದೇ ಪುಸ್ತಕ ಹುಡುಕುತ್ತಾ ,ಕೊನೆಗೆ ಆ ಪುಸ್ತಕ ಇಟ್ಟ ಜಾಗದಲ್ಲಿ ಸಿಗಬಹುದೇನೋ ?ಹೀಗೆ ಮನಸು, ಸದಾ ನೀನು ಆಗ ಸಿಗಬಹುದೇನೋ ,ಈಗ ಸಿಗಬಹುದೇನೋ ಎಂದು ಹಪಿಹಪಿಸುತ್ತಿರುತ್ತದೆ . ನಿನ್ನ ಹುಡುಕದ ಜಾಗ ಇಲ್ಲ,ದಿನ ಇಲ್ಲ ,ಕ್ಷಣ ಇಲ್ಲ . ಕೆಲವೊಮ್ಮೆ "ಶ್ರವಣ್ ನಿನಗೆ ನನಗಿಂತಲೂ ಒಳ್ಳೆ ಹುಡುಗಿ ಸಿಕ್ತಾಳೆ ಕಣೋ .ಡೋಂಟ್ ವರಿ " ಅಂತ ನಾನು ಇಷ್ಟ ಪಟ್ಟ ಹುಡುಗಿಯರು ಗಾಯದ ಮೇಲೆ ಉಪ್ಪು ಸವರುವಂತೆ ಹೇಳಿದ ಮೇಲೇನೆ ಗೊತ್ತಾಗುವುದು ಅದು ನೀನು ಅಲ್ಲ ಎಂದು .
              ಇಷ್ಟು ದಿನದಿಂದ ಪ್ರೀತಿಯನ್ನು ಅದುಮಿಟ್ಟುಕೊಂಡು , ಅದು ಈಗ ಮನದಾಳದಲ್ಲಿ ,ನೀನು ಸಿಗದೇ ,ಅದೂ ಹೊರಬರದೆ ಲಾವ ರಸದಂತೆ ನನ್ನಲ್ಲೇ ಕುದಿಯುತ್ತಾ ಇದೆ.ಏನು ಮಾಡೋದು ನಿಗಿ ನಿಗಿ ಯೌವ್ವನ ,ಹಾಳಾದ ರವಿಚಂದ್ರನ್ ಫಿಲ್ಮ್ ಗಳು ಹೋಮಕ್ಕೆ ತುಪ್ಪ ಹಾಕಿದ ಹಾಗೆ ಇನ್ನಷ್ಟು ಪುಷ್ಟಿ ಕೊಡುತ್ತಾ ಇವೆ .ಹೆದರಬೇಡ ,ನೀ ಎದುರು ಬಂದಾಗ ನಾನು ಇಷ್ಟ ದಿನ ಕೂಡಿಟ್ಟ ಈ ಪ್ರೀತಿಯನ್ನು ಲಾವ ರಸದಂತೆ ನಿನ್ನ ಮೇಲೆ ಚೆಲ್ಲುವುದಿಲ್ಲ . ಅದನ್ನು ನನ್ನ ಪ್ರೀತಿಯೆಂಬ ಮಾಯೆ ಉಪಯೋಗಿಸಿ ಮುತ್ತುಗಳನ್ನಾಗಿ ಅಂದರೆ ಈ ಪ್ರೇಮ ಪತ್ರಗಳಾಗಿ ಮಾಡಿಟ್ಟಿರುತ್ತೇನೆ . ಲಾವಾ ರಸದಿಂದ ಮುತ್ತುಗಳೇ ? ಪ್ರೇಮಲೋಕದಲ್ಲಿ ಎಲ್ಲಾ ಸಾಧ್ಯ ಗೆಳತಿ . ಪ್ರೀತಿಯ ಶಕ್ತಿ ಅಂತಹದ್ದು .ನೀ ಸಿಗುವ ತನಕ ಒಂದೊಂದು ಮುತ್ತು ಅಂದರೆ ಪ್ರೇಮ ಪತ್ರ ಬರೆಯುತ್ತಲೇ ಇರುತ್ತೇನೆ . ಸಿಕ್ಕಮೇಲೆ ಬರೆಯುದಿಲ್ಲವೇ ?ಅಂತ ಕೇಳಬಹುದು .ಮನ್ಮಥನೇ ನಿನ್ನ ಜೊತೆ ಇರಬೇಕಾದರೆ ಇನ್ನು ಅವನ ಬಿಲ್ಲು ಬಾಣ ಯಾಕೆ ? ಅಲ್ವಾ ?

ಭಾನುವಾರ, ಏಪ್ರಿಲ್ 21, 2013

ನಾನು ಹಾಗು valentines dayಗಳು:3,part b


                 Valentines day 3,part b:ಪ್ಯಾಂಟ್ tight ಆಗಿ ,ಗಾಳಿ ಆಡ್ಲಿ ಅಂತ shortsಗಳು ಹಾಕೋ ಕಾಲ


                                       ( "ನಾನು ಹಾಗು valentines dayಗಳು"trilogy ಯಾ ಕೊನೆಯ ಭಾಗ .)


    ನಮ್ಮ ಕ್ಲಾಸ್ ಇಂದ ಮಡಿಕೇರಿಗೆ ಪ್ರವಾಸ ಹೋಗೋಣ ಅಂತ ತೀರ್ಮಾನಿಸಿದೆವು .ಇಂತ ಸಮಾಜಸ್ನೇಹಿ ಕೆಲಸಗಳಿಗೆ ನಮ್ಮದೇ ಮುಂದಾಳತ್ವ ಎಂದು ನಿಮಗೆ ವಿಶೇಷವಾಗಿ ಏನು ಹೇಳಬೇಕಾಗಿಲ್ಲ . ಮಡಿಕೇರಿ ಅದಾಗಲೇ ತುಂಬಾ ಸಾರಿ ನೋಡಿದ್ದರಿಂದ ,ಹತ್ತುವುದರಿಂದ ಹಿಡಿದು ಇಳಿಯುವ ತನಕ ಎಲ್ಲರ ಎರಡು ದಿನದ ಪೂರ್ಣ ಜವಾಬ್ದಾರಿ ನಾನು ನನ್ನ ಕೆಲವು ಸ್ನೇಹಿತರು ತೆಗದುಕೊಂಡಿದ್ದೆವು .ಅವಳ ಆದಷ್ಟು ಬರದ ಹಾಗೆ ಎಲ್ಲ ಏರ್ಪಾಡು ನಾನು ಮಾಡಿದ್ದೆ.ಅಕಸ್ಮಾತ್ ಅವಳೇನಾದರೂ ದುಡ್ಡು ಕೊಡಲು ಬಂದರೆ ಸೀಟ್ ಖಾಲಿ ಅಂತ ಹೇಳಿ ಸಾಗು ಹಾಕುವ ಸ್ಕೆಚ್ ಹಾಕಿದ್ದೆ.ಆದ್ರೆ ಹೆಣ್ಣುಮಕ್ಕಳು ಗೋಳು ಅಷ್ಟಿಷ್ಟಲ್ಲಾ.ಈ ವಿಷಯ ಅವಳ ಸ್ನೇಹಿತೆಯರಿಗೆ ಗೊತ್ತಾಗಿ,ಅವರು "ಅವಳು ಬಂದ್ರೆ ಅಷ್ಟೇ ನಾವು ಬರೋದು .ಇಲ್ಲ ಅಂದ್ರೆ ಇಲ್ಲ ."ಅಂತ ಹೇಳಿದ್ದಾರೆ .ಅಲ್ಲೇ ಎಡವಟ್ಟಾಗಿದ್ದು .ಆ ಗುಂಪಿನಲ್ಲಿ ನನ್ನ ಗೆಳಯನ so called ಡವ್ ಇದ್ದಳು .ಇದನ್ನು ಕೇಳಿದ್ದೆ ಅವನು "ಲೋ ಮಚಾ , ಪ್ಲೀಸ್ ಒಪ್ಪಿಕೊಳ್ಳೋ .ನನಗೋಸ್ಕರ.ಪ್ಲೀಸ್ ಮಚಾ .ಫ್ರೆಂಡ್ಗೋಸ್ಕರ ಇಷ್ಟು ಮಾಡಲ್ವ ." ಅಂತ ರಾತ್ರಿ ಎಲ್ಲಾ ಎಣ್ಣೆ ಹೊಡೆದು ನನ್ನ ಹತ್ತಿರ ಗೊಳೋ ಅಂದು ಅತ್ತು ಅತ್ತು ಬೇಡಿ ಕೊಂಡ. ಸ್ನೇಹ ಮುಖ್ಯ ನೋಡಿ ಒಪ್ಪಿಕೊಳ್ಳಬೇಕಾಯ್ತು .

      ಅಂತೂ ಇಂತೂ ಹೊರೆಟೆವು ಬಸ್ ಏರಿ to ಮಡಿಕೇರಿ .ಒಂದೆರಡು ಸ್ಥಳಗಳು ನೋಡಿದ ಮೇಲೆ ಮುಂದೆ ಒಂದು ಸಣ್ಣ ಜಲಪಾತ ನೋಡಬೇಕಾಗಿತ್ತು .ಎಲ್ಲರು ನೀರಲ್ಲಿ ಆಡಿದರೆ ಮಜಾ ಇರುತ್ತೆ ಅಂತ ಹೇಳಿದಕ್ಕೆ, ಮಧ್ಯಾನದಿಂದ ಸಾಯಂಕಾಲದ ವರೆಗೆ ಅಲ್ಲೇ ಕಳೆಯಲು ನಿರ್ಧರಿಸಿದೆವು .ರಾತ್ರಿ ಉಳಿಯಲು ಫೋನಿನಲ್ಲಿ ನಮಗೆ ಗೊತ್ತಿರುವ lodge ನಲ್ಲಿ ವ್ಯವಸ್ಥೆ ಮಾಡಿದ್ದೆ .ಅದಾಗಲೇ ಸಾಕಷ್ಟು ಸರಿ ಜಲಪಾತ ನೋಡಿದ್ದರಿಂದ,ಎಲ್ಲರನ್ನು ಆ ಕಡೆ ಕಳಿಸಿ ನಾನು ಯಾವುದಕ್ಕೂ lodge ವ್ಯವಸ್ಥೆ ವಿಚಾರಿಸಿಕೊಂಡು ಬರಲು ಹೋದೆ .ಹೋದ ಕೆಲಸ ಮುಗಿಸಿ ಬಸ್ ಕಡೆ ಬರುತ್ತಾ ಇದ್ದಾಗ ಬಸ್ನ ಹತ್ತಿರ ಯಾವುದೋ ಹುಡುಗಿಯೊಂದು ಓಡಾಡುತ್ತಿರುವುದು ಕಾಣಿಸಿತು .ಹೋಗುವಾಗ ಎಲ್ಲರು ಹೋಗಿದ್ದಾರೆ ಅಂದು ಖಾತರಿ ಪಡಿಸಿ ಹೊರಟ್ಟಿದ್ದು ನೆನಪು .ಯಾವುದು ಇದು ಹೆಣ್ಣು ಜೀವ ಅಂತ ನೋಡಲು ಬಸ್ ಹತ್ತಿರ ಹೋದೆ .ಕೆಲವು ಸಲ ಒಳ್ಳೆಯವರು ಆಗೋದು ತಪ್ಪು . ಯಾಕಂದ್ರೆ ಆ ಹುಡುಗಿ ಇನ್ಯಾರೋ ಅಗಿರಲಿಲ್ಲಾ.ಯಾರ ಮುಖ ನೋಡಿದ್ರೆ ನಾನು ಆ ದಿನ ಊಟ ಮಾಡುತ್ತಿರಲಿಲ್ಲವೋ ,ಅವಳೇ.

    ಛೇ ಯಾಕಾದ್ರು ಬಂದನೋ ಅನ್ನಿಸಿತು .ನಾವಿಬ್ಬರು ಚಿತ್ರದ climax ನಲ್ಲಿ ಎದುರಾಗುವ ಹೀರೋ ವಿಲನ್ ಗಳ ಹಾಗೆ ಎದುರು ಬದರು ನಿಂತೆದ್ದೆವು. ಇಲ್ಲಿ ಪ್ರಶ್ನೆ ಏನಂದ್ರೆ ,ಯಾರು ಮೊದಲು ಹೊಡೀತಾರೆ ಅನ್ನೋದು ಅಲ್ಲಾ ,ಯಾರು ಮಾತಾಡುತ್ತಾರೆ .ಅವಳಾ ,ನಾನಾ? . ಯಾಕಂದ್ರೆ ನಾವಿಬ್ಬರು ಮಾತಾಡಿಸದೇ ೨ ವರ್ಷ ಆಗಿದ್ದವು .ಏನು ಅಂತ ಮಾತಾಡಿಸೋದು ?ಒಂದರ್ಥದಲ್ಲಿ ಅವಳ ಹೆಸರು ಹೇಳುವುದಕ್ಕೆ ನನ್ನ ಬಾಯಿ ರೆಡಿ ಇರಲಿಲ್ಲಾ.ಆದರು ನಾನೀಗ organizer .ಅದು ಮೊದಲು ,ಆಮೇಲೆ ವೈಯಕ್ತಿಕ ದ್ವೇಷ .ಆದರೂ ಏನಂತ ಮಾತಾಡ್ಲಿ? ಅವಳು ಕೈಯಲ್ಲಿ ಮೊಬೈಲ್ ಹಿಡ್ಕೊಂಡು ಯಾರಿಗೋ ಕಾಲ್ ಮಾಡ್ತಾ ಇದ್ದಳು ಅನ್ನಿಸುತ್ತೆ . ಸ್ವಲ್ಪ ಹೈರಾಣ ಆಗಿದ್ದಳು .ಇನ್ನೇನು ಬಾಯಿ ಬಿಡಬೇಕು ಅನ್ನುವಷ್ಟರಲ್ಲಿ ,ಅವಳೇ "ಶ್ರವಣ್ ಇನ್ನು ಇಲ್ಲೇ ಇದ್ದೀಯ?ಅವರು ನನ್ನ ಬಿಟ್ಟು ಹೋಗಿಬಿಟ್ಟರು .ಎಲ್ಲರಿಗೂ cal ಮಾಡ್ತ ಇದ್ದೀನಿ .ಯಾರು ಎತ್ತುತ್ತಾ ಇಲ್ಲಾ "ಅಂದಳು .ಅವಳು ಏನು ಹೇಳಿದಳೋ ,ನಾನು ಏನು ಕೇಳಿಸಿ ಕೊಂಡನೋ ಗೊತ್ತಿಲ್ಲಾ "ಏನು ?" ಅಂತ ಜೋರಾಗಿ ಕೇಳಿಬಿಟ್ಟೆ.ಮೊದಲೇ ಹೈರಾಣಾಗಿದ್ದ ಹುಡುಗಿ ನನ್ನ voice ಕೇಳಿ ಮತ್ತಷ್ಟು ಗಾಬರಿಯಾದಳು .ಬಹುಶಃ ಬೇರೆ ಯಾರಾದ್ರೂ ಸಿಕ್ಕಿದ್ದರೆ ಚೆನ್ನಾಗಿತ್ತು ಅನ್ನಿಸಿರಬೇಕು ಅವಳಿಗೆ .ನಾನೇ ಸ್ವಲ್ಪ ಸುಧಾರಿಸಿಕೊಂಡು "ಏನಾಯ್ತು " ಅಂತ ಮತ್ತೆ ನಿಧಾನವಾಗಿ ಕೇಳಿದೆ .ಆಗ ಕಥೆ ಹೇಳಲು ಶುರು ಮಾಡಿದಳು .ಅದೇನು ಆಗಿದೆ ಅಂದ್ರೆ ಇವಳು ಮನೆಗೆ ಫೋನ್ ಮಾಡೋಕೆ ಅಂತ ಮೊಬೈಲ್ ಎತ್ತಿಕೊಂಡಿದಾಳೆ ,tower ಇಲ್ಲ ,ಸ್ವಲ್ಪ ದೂರ ಹೋಗಿದಾಳೆ .ಆಗ ಇವರೆಲ್ಲಾ ಹೊರಟಿದ್ದಾರೆ .ಮೋಜು ಮಸ್ತಿ ನಡುವೆ ತಮ್ಮ ಜೊತೆಗಿರುವ ಹುಡುಗಿ miss ಆಗಿದಾಳೆ ಎಂಬುದನ್ನು ಯಾರು ಗಮನಿಸಲಿಲ್ಲ .ಆಗಿದ್ದು ಆಯಿತು ,ಏನು ಮಾಡುವುದು ಈಗ ಅಂತ ನಾನು ತಲೆ ಕೆರದುಕೊಂಡೆ .ಬೇರೆ ದಾರಿ ಇಲ್ಲ .ಈಕೆಯನ್ನು ಕರೆದು ಕೊಂಡು ಹೋಗಲೇಬೇಕು .ಛೇ ಜಗತ್ತಿನ ಕೊನೆಗೆ ಬಂದು ನಿಂತ ಹಾಗೆ ಆಯಿತು .ನಾನು "ಸರಿ .ನನ್ನ ಜೊತೆ ಬಾ ." ಅಂತ ಮನಸಿಲ್ಲದ ಮನಸಲ್ಲಿ ಕರೆದೆ .ಅವಳು ಮನಸಿಲ್ಲದ ಮನಸಲ್ಲಿ ಹೊರಟಳು .

     ಇಬ್ಬರು ಹೊರೆಟೆವು .ಏನು ಅನ್ನಿಸಿತೋ ನನಗೆ ,ನೀರಿನ bottle ಅವಳ ಮುಂದೆ ಹಿಡಿದು "ನೀರು ಬೇಕಾ?" ಅಂತ ಕೇಳಿದೆ .ಅದಕ್ಕೆ ಕಾಯ್ತಾ ಇದ್ದಳು ಅನ್ನಿಸುತ್ತೆ.ಕಸಿದುಕೊಂಡು ನೀರೇ ನೋಡದ ತಮಿಳ ನಾಡು ಜಯಲಲಿತಾ ಕುಡಿದ ಹಾಗೆ ಕುಡಿದಳು ."thanks "ಅಂತ ಒಂದು smile ಕೊಟ್ಟಳು .ನಾನು ಅವಳನ್ನು ಸರಿಯಾಗಿ ನೋಡಿರಲಿಲ್ಲ ಅನಿಸುತ್ತೆ ,ಇಷ್ಟು ದಿನ . ಯಾಕೋ ಚೆನ್ನಾಗಿ ಕಂಡಳು ನನಗೆ .

ನಾವು ಮುಂದೆ ಹೋಗುವ ದಾರಿ ಉಬ್ಬು ತಗ್ಗುಗಳಿಂದ ಕೂಡಿತ್ತು .ನಾನೇನು ಗಂಡು ಜೀವ ಸಲೀಸಾಗಿ ನಡೆದುಕೊಂಡು ಹೋದೆ .ಆದರೆ ಅವಳಿಗೆ ಸ್ವಲ್ಪ ಕಷ್ಟ ಆಗುತಿತ್ತು .ಸ್ವಲ್ಪ ಜಾಸ್ತೀನೇ ಕಷ್ಟ ಪಡ್ತಾ ಇದಾಳಲ್ಲ ಅನ್ನಿಸಿ ನನಗೆ ,ಯಾಕೆ ಅಂತ ಅವಳನ್ನು ಒಮೆ ಸರಿಯಾಗಿ ನೋದ್ದಿದೆ . ಅಸ್ಸಾಮಿ heels ಹಾಕೊಂಡಿದೆ .ಥತ್ ಹರಿಕೆ !ಹೆಣ್ಣುಮಕ್ಕಳು ಹಿಂದೆ ಸುನಾಮಿ ಬರ್ತಾ ಇದೆ ,ಮುಂದೆ ಓಡಿ ಅಂದ್ರೂ ಹುಡುಗೀರು heels ಬಿಡಲ್ಲ ." heels ತೆಗಿ ಇಲ್ಲ ಅಂದ್ರೆ, guarantee ಕಾಲು ಉಳಕುತ್ತೆ " ಅಂತ ಸ್ವಲ್ಪ ಗಂಡ ಹೆಂಡತಿಗೆ ಜೋರು ಮಾಡೋ voice ಅಲ್ಲೇ ಹೇಳಿದೆ ಅವಳಿಗೂ ಕರೆಕ್ಟ್ ಅನ್ನಿಸಿರಬೇಕು .ಬಿಚ್ಚಿದ ಕೊಡಲೇ ಎನಾಶ್ಚರ್ಯ? ಭುಜ ತನಕ ಬರುತ್ತಿದ್ದ ಹುಡುಗಿ ಎದೆ ತನಕ ಬಂದಳು .ಹಾಗೆ ಸ್ವಲ್ಪ ಮುಂದೆ ಹೋಗುವಾಗ ಒಂದು ತಗ್ಗು ಬಂತು .ನಾನೇನೋ ಇಳಿದು ಬಿಟ್ಟೆ .ಅವಳು ಅಲ್ಲಿಯೇ ನಿಂತು ಬಿಟ್ಟಳು .ನಾನು ಅವಳನ್ನು ನೋಡುತ್ತಾ ನಿಂತೆ .ಏನು ಹೇಳಬೇಕೆಂದು ತೋಚಲಿಲ್ಲ .ಹಾಗೆ ಜೋರಾಗಿ ಹಾರಿ ಕಾಲು ಮುರ್ಕೋ ಅಂತ ಹೇಳ್ಬೇಕು ಅನ್ನಿಸಿತು . ಅಷ್ಟರಲ್ಲಿ ಅವಳು "ನಂಗೆ ಕಷ್ಟ ಆಗುತ್ತೆ ,ಸ್ವಲ್ಪ ಹಿಡ್ಕೋತೀಯಾ ? "ಅಂದಳು.ಓಕೆ ಅವಳು ಕೈ ಹಿಡ್ಕೋತೀಯಾ ಅಂತ ಹೇಳಿದಳು ಅಂದು ಕೊಂಡೆ . ಆದರೆ ಅವಳು ತಾನು heels ಹಿಡಿದುಕೊಂಡಿರೋ ಕೈ ಮುಂದೆಮಾಡಿದಳು.ನಾನು ಇದು ಒಳ್ಳೆ ಕರ್ಮ ಆಯ್ತಲ್ಲ .ಮನೆಯಲ್ಲಿ ಒಂದು ಕಡ್ಡಿ ಇತಿ ಇಡೋಲ್ಲ ,ಇವಳಜ್ಜಿ heels ಹಿಡ್ಕೊಂಡು ,ಇವಳನ್ನು ಕೆಳಗೆ ಇಳಿಸಬೇಕ ?ಬ್ರಹ್ಮಾಂಡ ಸ್ವಾಮೀಜಿ, ಸ್ತ್ರೀ ದೋಷ ಅಂತ ಹೇಳಿದ್ದು ಇದೆ ಇರಬೇಕು ಅಂದುಕೊಂಡು ,ಕೈಗೆ heels ತಗೊಂಡು ಅದನ್ನೇ ಅಲ್ಲೇ ಬಿಸಾಕಿದೆ .ಅವಳು "ಅಯ್ಯೋ" ಅಂದ್ಲು."heel shoes .ಜೀವ ಇಲ್ಲಾ ಅದಕ್ಕೆ .ಓಡಿ ಹೋಗೋಲ್ಲ " ಅಂತ ಕೈ ಮುಂದೆ ಮಾಡಿದೆ . ಅವಳು ಕೈ ಹಿಡಿದಳು .ಎನೊ ಒಂದು ಥರ ಆಯಿತು .ಏನೋ ಮಿಂಚು ಮೈಯಲ್ಲಿ pass ಆದ ಹಾಗೆ .ಎನಾಯಿತೊ ಗೊತ್ತಿಲ್ಲ ಹುಡುಗಿ ಜಾರಿ ಬಿದ್ದು ನನ್ನ ಮೇಲೆ ಬಿದ್ದಳು ,ನಮ್ಮ ಕನ್ನಡ ಫಿಲಂ ಗಳಲ್ಲಿ ರವಿಚಂದ್ರನ್ ಮೇಲೆ ಹೀರೋಯಿನ್ಗಳು ಬೀಳೋ ಹಾಗೆ .ಯಾವಾಗಲೂ ಅದು ಹೇಗೆ ಹುಡುಗಿಯರು ರವಿಮಾಮನ ಮೈ ಮೇಲೆ ಬೀಳ್ತಾರೆ ? ನನ್ನ ಮೇಲೂ ಬೀಳೋ ಹಾಗೆ ಮಾಡಪ್ಪ ಅಂತ ಪ್ರತಿ ಸಾರಿ ಬೇಡಿಕೊಳ್ಳುತ್ತಾ ಇದ್ದೆ. ದೇವರು ಈಗ ಅಸ್ತು ಅನ್ನಬೇಕಾ. ಅವಳನ್ನು ಅಷ್ಟು ಹತ್ತಿರ ದಿಂದ ಯಾವತ್ತೂ ನೋಡಿರಲಿಲ್ಲ .ಅವಳ ಕಣ್ಣಿನಲ್ಲಿ ಕಣ್ಣು ಇಟ್ಟು ನೋಡಿರಲಿಲ್ಲ .ನೋಡಿದಾಗಲೆಲ್ಲಾ ಬರಿ ಕೋಪ ತುಂಬಿಕೊಂಡಿರುತಿತ್ತು . ಆದರೆ ಈ ಸಲ ಅದು ಇರಲಿಲ್ಲ ಎನೋಒಂಥರಾ ಚೆನ್ನಾಗಿ ಕಾಣಿಸುತ್ತಾ ಇದಾಳೆ ಅನ್ನಿಸಿತು .ಎನೋ ಗೊತ್ತಿಲ್ಲ ,ಒಂದು ಎರಡು ನಿಮಿಷ ಹಾಗೆ ಇದ್ದ್ವಿ. ಇದು ಕನಸೋ .ಫಿಲಂ sceneಒ ಅಥವಾ real sceneಒ ಗೊತ್ತಾಗುವ ಅಷ್ಟರಲ್ಲಿ ಎರಡು ನಿಮಿಷ ಆಯಿತು .ಇಬ್ಬರು ಎದ್ದೆವು .ಎನು ಮಾತಾಡೋದು ಅಂತ ಗೊತ್ತಾಗ್ಲಿಲ್ಲ ಇಬ್ಬರಿಗೂ .

        ಇನ್ನೇನು ಇಬ್ಬರು ಮಾತಾಡಿಸಬೇಕು ಅನ್ನುವ ಅಷ್ಟರಲ್ಲಿ ನಾಲ್ಕೈದು ಜನ ಮಾತನಾಡುವ ಶಬ್ದ ಕೇಳಿಸಿತು .ಯಾರು ಅಂತ ನೋಡಿದರೆ, ನಮ್ಮ ಕ್ಲಾಸ್ನವರು .ಅವಳ ನಾಲ್ಕು ಜನ ಗೆಳತಿಯರು ,ನಮ್ಮ ಹುಡುಗ್ರು ಒಂದಿಷ್ಟು ಇವಳನ್ನು ಹುಡುಕಿಕೊಂಡು ವಾಪಾಸು ಬಂದಿದ್ದರು .ಇವಳನ್ನು ನೋಡಿದ ಕೂಡಲೇ ಆ ಹುಡುಗಿಯರು ಜೊತೆಗೆ ಇವಳು ಅಳೋಕೆ ಶುರು ಮಾಡೋದೇ ?"ಸಾರೀ ಕಾಣೆ ,ನಮಗೆ ಗೊತ್ತಾಗ್ಲಿಲ್ಲ ","ನಿಂಗೆ ಏನಾಯ್ತೋ ಅಂತ ಹೆದರಿಕೊಂಡು ಬಿಟ್ಟಿದ್ದ್ವಿ "ಹೀಗೆ ಏನೇನೋ ಹೇಳುತ್ತಾ ಎಲ್ಲರು ಅಳೋಕೆ ಶುರು ಮಾಡಿದರು .ಈ ಹುಡುಗಿಯರು ಅಳೋಕೆ ಯಾಕೆ ಶುರು ಮಾಡ್ತಾರೆ ಅನ್ನೋದೇ ಗೊತ್ತಾಗಲ್ಲ .ಯಾವಗಲೂ ಕಣ್ಣೀರು stock ಮಾತ್ರ ಇದ್ದೆ ಇರುತ್ತೆ . ಆಮೇಲೆ ಎಲ್ಲರನ್ನು ಸಮಾಧಾನ ಮಾಡಿ ಕೊನೆಗೆ falls ಗೆ ಕರೆದುಕೊಂಡು ಹೋಗುವಷ್ಟರಲ್ಲಿ ಸಾಕು ಸಾಕು ಆಯಿತು .

      ಜಲಪಾತ ಕ್ಕೆ ಹೋದವರೆ ಎಲ್ಲರೂ ನೀರಲ್ಲಿ ಬಿದ್ದು ಆಡಲು ಶುರು ಮಾಡಿದರು .ನಮ್ಮ ಹುಡುಗೀನು ಅಷ್ಟೇ .ಉಪ್ಸ್ ಏನು ನಮ್ಮ ಹುಡುಗಿ ಅಂದು ಬಿಟ್ತನ್ನಲ್ಲಾ .ಬರಿ ಲವ್ ಸ್ಟೋರಿ ಮಾಡೋ ನಮ್ಮ ಕನ್ನಡ ಫಿಲಂ ಗಳು ,ನನ್ನ ಹಿಂದಿನ ಸರಣಿಗಳು ಓದಿದ್ದ್ದರೆ ,ಇಷ್ಟು ಹೊತ್ತಿಗೆ ನಿಮಗೆ ಗೊತ್ತಾಗಿರಬೇಕು ಅವಳೇ ನಮ್ಮ next ಹುಡುಗಿ ಅಂತ .ನಂಗೆ ಹುಷಾರಿಲ್ಲ ಅಂತ ನಾನು ನೀರಿಗೆ ಇಳಿದಿರಲಿಲ್ಲ . ಅವಳನ್ನೇ ನೋಡುತ್ತಾ ಕುಳಿತಿದ್ದೆ .ಯಕೊ ಗೊತ್ತಿಲ್ಲಾ . ಅವಳು ನೀರಿಂದ ಎದ್ದಳು . ಅಬ್ಬಾ ಯಶ್ ಚೋಪ್ರ ಚಲನ ಚಿತ್ರಗಳಲ್ಲಿನ ಮಳೆಯಲ್ಲಿ ಮಿಂದ ಹೀರೋಯಿನ್ ಥರಹ ಕಂಡಳು .ನನಗೆ ಆಶ್ಚರ್ಯ ? ಇಷ್ಟು ದಿನ ನಾನು ದ್ವೇಷಿಸುತ್ತಿದ್ದ ಹುಡುಗಿ ಇವಳೇನಾ ಅಂತ ? ಎಲ್ಲ trip ಮುಗಿದು ಉದೋ ಅಂತ ನಮ್ಮ ಊರಿಗೆ ಬಂದೆವು.Bus collegeಗೆ ಬಂದು ನಿಂತಿತು .ಎಲ್ಲರೂ ಮನಸಿಲ್ಲದ ಮನಸಲ್ಲಿ ಮನೆಗೆ ಹೊರಟರು .ನಾನು ಡ್ರೈವರ್ ಜೊತೆ ದುಡ್ಡು settle ಮಾಡುತ್ತಾ ಇದ್ದೆ .ಯಾರೋ "ಶ್ರವಣ್ ,ಶ್ರವಣ್ "ಅಂತ ಹಿಂದೆಯಿಂದ ಕರೆದ ಹಾಗೆ ಆಯಿತು .ಯಾರು ಅಂತ ನೋಡಿದರೆ ಅವಳು .ಏನಿರಬಹುದು ಅಂತ ಅವಳ ಹತ್ತಿರ ಹೋಗಿ "ಏನು?" ಅಂದೆ .ಅವಳು ಹಾಗೆ ಒಂದು ಚೆಂದದ smile ಕೊಡುತ್ತಾ "thanks ಶ್ರವಣ್ ,ಆವತ್ತು ನಂಗೆ ಹೇಳೋಕೆ ಆಗ್ಲಿಲ್ಲಾ . "ಅಂತ ಹೇಳಿ ಕೈ ಮುಂದೆ ಮಾಡಿದಳು . ಥ್ಯಾಂಕ್ಸ್ ಕೊಡಲು ಅವಳ ಕೈ ಹಿಡಿದವನಿಗೆ ಮತ್ತದೇ ಅನುಭವ .Trip ಎನೋ ಮುಗಿಯುತು ,ಆದರೆ ನಮ love ಶುರು ಆಯಿತು .

       ಆಮೇಲೆ ಎಲ್ಲಾ ಉಲ್ಟಾ ಪಲ್ಟ. ಆಗಿದ್ದೆಲ್ಲ ಮಾಯಜಾಲ .ಮೊದಮೊದಲು ತುಂಬಾ ಮಾತಾಡ್ತಾ ಇದ್ದ್ವಿ . ಆಮೇಲೆ ಒಳ್ಳೆ friends ಆದ್ವಿ .ತುಂಬಾ ಸುತ್ತಡೋಕೆ ಶುರು ಮಾಡಿದ್ವಿ .ಆಮೇಲೆ ಒಂದು ದಿನ ಓಬ್ಬರಿಗೊಬ್ಬರು "ಇ ಲವ್ ಯು" ಹೇಳಿಕೊಂಡು ಬಿಟ್ವಿ ,ಇದನ್ನೆಲ್ಲಾ ಯಾಕೆ ಎರಡೇ ಸಾಲಲ್ಲಿ ಹೇಳಿದೆ ಅಂದ್ರೆ ಅಷ್ಟು ಬೇಗ ಎಲ್ಲ ಆಗಿ ಹೋಗಿಬಿಡ್ತು. ಅದೇನೋ ಹೇಳ್ತಾರಲ್ಲ ಮಕ್ಕಳು ಆಗೋಕೆ ೯ ತಿಂಗಳು ಬೇಕೇ ಬೇಕು ಆದ್ರೆ ಲವ್ ಆಗೋಕೆ ಒಂದು ನಿಮಿಷ ಸಾಕು ಅಂತ ,ನಿಜ

        ಲೈಫ್ ಚೆನ್ನಾಗಿ ನಡೀತಾ ಇತ್ತು . valentines day ಬಂತು .ಆದರೆ ಈ ಸಲ different .ಪ್ರತಿ ಸಲ ದ್ರಾಕ್ಷಿ ಹುಳಿನೋ ,ಸಿಹಿನೋ ಅಂತ ಗೊತ್ತಾಗ್ತಾ ಇರಲಿಲ್ಲ.. ಆದರೆ ಈ ಸಲ ಪಕ್ಕಾ ಸಿಹಿ ಅಂತ ಗೊತ್ತಾಗಿಯೇ ಬಿಟ್ಟಿತು . ಆದರೆ ಇದು ಮೊದಲ ಸಲ ಆಲ್ವಾ . ಹೇಗೆ ಮಾಡಬೇಕಿತ್ತು ಅಂತ ಗೊತ್ತಿರಲಿಲ್ಲ .ಅದಕೆ ನನ್ನ ಮನೆಹಾಳು ಗೆಳಯನನ್ನು ಸಲಹೆ ಕೇಳಿದೆ. ಅವನು ಒಂದು ಒಳ್ಳೆ ಐಡಿಯಾ ಕೊಟ್ಟ .ಪ್ರೇಮ ,ಪ್ರೀತಿ ಜೊತೆಗೆ ಹೂವು ಇರಬೇಕು ಅಂತ ನಮ್ಮ ರವಿ ಸರ್ ಹೇಳಿದಾರೆ . ಹೂವು ಇರೋ ಜಾಗ park .ಅದಕೆ parkಗೆ ಹೋಗು valentines gift ಕೊಡು ಅಂದ .ನನಗೂ ಸರಿ ಅನಿಸಿತು . ನಾವು ನಾಳಿನ ಸುದಿನ ,ಮಾಹದಿನಕ್ಕೆ ಸಜ್ಜಾಗಲು ಶುರು ಇಟ್ಟುಕೊಂಡೆವು .ಒಂದು ಒಳ್ಳೆ ಗಿಫ್ಟ್ ,cadbury 's ಚಾಕ್ಲೇಟ್ ,ಒಂದು ಕೆಂಪು ಗುಲಾಬಿ ಇಟ್ಟುಕೊಂಡು ಕನಸುಗಳು ಕಾಣುತಾ ಮಲಗಿದೆ

      ಮಾರನೇ ದಿನ ಹೇಳಿದ ಪಾರ್ಕ್ ನಲ್ಲಿ ಅವಳಿಗೋಸ್ಕರ ಕಾಯುತ್ತಾ ಕುಳಿತಿದ್ದೆ . ಅರ್ಧ ಗಂಟೆ ಆಗಿದ್ದರೂ ಅವಳು ಬಂದಿರಲಿಲ್ಲ . ಹುಡುಗಿರೇ ಹೀಗೆ ಒಳ್ಳೆ ಕೆಲಸಕ್ಕೆ ಯಾವತ್ತು ಮುಂಚೆ ಬರೋಲ್ಲ ,ಲೇಟ್ ಮಾಡಿಕೊಂಡೇ ಬರೋದು . Even first night ಅಲ್ಲೂ ಅಷ್ಟೇ ,ಅವರೇ ಲೇಟ್ ಆಗಿ ಬರೋದು .ಹೀಗೆ ಏನೋ ಯೋಚನೆ ಮಾಡುತ್ತ ಕುಳಿತಿದ್ದ ಸಮಯದಲ್ಲಿ ಅವಳು ಬಂದಳು .ಪಿಂಕ್ ಸೀರೆ ಇಟ್ಟುಕೊಂಡು ಬಂದಿದ್ದಳು .ಬೇರೆ ಹುಡುಗರು ಆಗಿದ್ದರೆ ,ಅವಳ ನೋಟ ಮೊದಲು ಅವಳ ಡ್ರೆಸ್ ಹತ್ತಿರ ಹೋಗುತಿತ್ತು ,ಆದರೆ ನನ್ನದು ಅವಳ ಖಾಲಿ ಕೈ ಹತ್ತಿರ ಹೋಯಿತು .ಇವಳೇನು ಗಿಫ್ಟ್ ತಂದಿಲ್ವಾ ?ಥತ್ ! ಎನು ಹುಡುಗೀರೋ?ಅಂತ ಮನಸಲ್ಲಿಯೇ ಅಂದುಕೊಂದು,ಮತ್ತೊಮ್ಮೆ ಅವಳನ್ನು ದಿಟ್ಟಿಸಿ ನೋಡಿದೆ . ಆಹಾ !ಸೌಂದರ್ಯ ದೇವತೆ . ಸೊಂಟ ಕಾಣಿಸೋ ಹಾಗೆ ಸೀರೆ ಉಟ್ಟುಕೊಂಡು ಬಂದಳು .ಆಗ ಹುಡುಗೀರು gift ಅಂತ ದುಡ್ಡು ಖರ್ಚು ಮಾಡೋದೇ ಬೇಡ ,ಅನ್ನಿಸಿತ್ತು ನನಗೆ .ಬಂದವಳೇ "ಹಾಯ್ "ಎಂದಳು .

        ನಾನು ಬಾ ಕುಳಿತುಕೋ ಅಂತ ಜಾಸ್ತಿ ಜನ ಇರದೇ ಇರೋ ಬೆಂಚ್ ಹತ್ತಿರ ಕರೆದುಕೊಂಡು ಹೋದೆ.ಅವಳನ್ನು ಮುಂದೆ ಕೂರಿಸ್ಕೊಂಡು ನಾನು ಕುಳಿತೆ . ಅವಳನ್ನು ನೋಡುತ್ತ ಇದ್ದರೆ ನೋಡುತ್ತಲೇ ಇರಬೇಕು ಅನ್ನಿಸಿತು . ಹಾಗೆ ೧ ೬ ೦ km ಸ್ಪೀಡ್ ಅಲ್ಲಿ ಬರುತ್ತಾ ಇರೋ feelings ಗಳನ್ನೂ ಅದುಮಿಟ್ಟುಕೊಂಡು ,ನಾನು ತಂದ ಗಿಫ್ಟ್ ಅವಳ ಮುಂದೆ ಇಟ್ಟೆ . ಅವಳು ನಿಧಾನವಾಗಿ ಅದನ್ನು ತೆಗದಳು . ಅದರಲ್ಲಿ ಒಂದು ರಿಂಗ್ ಇಟ್ಟಿದ್ದೆ .ಅದನ್ನು ನೋಡಿದವಳೇ ಸಿಕ್ಕಾಪಟ್ಟೆ ಖುಷಿಯಾದ ಅವಳು ಅದನ್ನು ತೆಗದು ,ನನಗೆ ತೊಡಿಸಲು ಸನ್ನೆ ಮಾಡಿದಳು .ಅವಳ ಕೈ ಹಿಡಿದೆ. ಏನು soft ?ಉಂಗುರ ಅವಳ ಕೈಗೆ ತೊಡಿಸಿದವನೇ ,ನನಗೆ ತಡೆಯಲಾಗಲಿಲ್ಲ . ಹಾಗೆಯೇ ಅವಳನ್ನು ಹತ್ತಿರ ಏಳದುಕೊಂಡೆ .ಅವಳ ಕಣ್ಣಲ್ಲಿ ಕಣ್ಣಿಟ್ಟು ನೋಡಿದೆ . ಅವಳ ಕಣ್ಣು , ಆ ಚೆಂದುಟಿ ಎಲ್ಲಾ ನಾನು ಬಯಿಸಿದ್ದನ್ನೇ ಬಯಸುತಿತ್ತು . ಹಾಗೆಯೇ ಅವಳ ತುಟಿಗೆ ನನ್ನ ತುಟಿಯೊತ್ತಿದೆ . ಸ್ವರ್ಗ ಅಂದ್ರೆ ಏನು ಅಂತ ಆಗ್ಲೇ ಗೊತ್ತಾಗಿದ್ದು ನನಗೆ .ಒಂದು ಹತ್ತು ಸೆಕೆಂಡ್ ಆಗಿರಬಹುದು .ಯವುದೋ ಒಂದು ಗುಂಪು ನಮ್ಮ ಹತ್ತಿರ ಬರುತ್ತಾ ಇರುವ ಹಾಗೆ ಅನ್ನಿಸಿತು .Public place ಅಲ್ಲಿ ಇದೀವಿ ಆಮೇಲೆ ಗೊತ್ತಾಗಿ ಮತ್ತೆ ಸರಿ ಕೂತು ಕೊಂಡೆವು .

          ಆಗ ಯಾರೋ ಹಿಂದೆಯಿಂದ "ನಮಸ್ಕಾರ " ಅಂತ ಹೇಳಿದ ಹಾಗೆ ಆಯಿತು .ಯಾರು ಅಂತ ನಾವಿಬ್ಬರು ನೋಡಿದ್ರೆ ಒಂದು ಗಂಡಸರ ಗುಂಪು ನಿಂತಿದೆ . ಎಲ್ಲರು ಹಣೆಗೆ ಕೇಸರಿ ಬಟ್ಟೆಯ ಪಟ್ಟಿ ಕಟ್ಟಿಕೊಂಡಿದ್ದಾರೆ . ಎಲ್ಲರು ಉದ್ದನೆಯ ಕುಂಕುಮ ಇಟ್ಟಿದಾರೆ . ಅದ್ರಲ್ಲಿ ಒಬ್ಬ "ಹಲೋ ಯಾರು ನೀವು lovers ಹಾ ?". ನನಗೆ ಏನು ಹೇಳ್ಬೇಕು ಅಂತ ಗೊತ್ತಾಗ್ಲಿಲ್ಲಾ .ಒಮ್ಮೆ ಅವಳ ಮುಖ ನೋಡಿದೆ .ಸ್ವಲ್ಪ ಹೆದರಿದ್ದಾಳೆ .ನನಗೂ ಆಗಿತ್ತು ಆದರು ಅವಳ ಮುಂದೆ ತೋರಿಸಬಾರದು ಅಂತ " ಅದನ್ನು ಕೇಳೋಕೆ ನೀವು ಯಾರು? " ಅಂತ ಜೋರಾಗಿ ಕೇಳಿದೆ .ನಾನು ೫ ಅಡಿ ಅವರೆಲ್ಲ ೬ ಅಡಿ ಹುಡುಗರು .ನನ್ನ dialogue delivery scene ಗೆ ಹೊಂದಲಿಲ್ಲ ಅನ್ನಿಸಿತು ನನಗೆ. ಆಗ ಅಲ್ಲಿದ್ದ ಒಬ್ಬ "ನಾವು ನವರಂಗಿ ದಳದವರು .ಭಾರತೀಯ ಸಂಸ್ಕೃತಿ ರಕ್ಷಕರು " ಅಂದನು .ನಾನು ಎದ್ದು ಹೀರೋ ತರಹ "ಅದಕ್ಕೆ ,ಏನೀಗ?" ಎಂದೆ ." ನಿಮಗೆ ಗೊತ್ತಿಲ್ವಾ ,valentines day ಆಚರಣೆ ನಮ್ಮ ಸಂಸೃತಿಗೆ ಮಾರಕ ಅಂತ . ಇದನ್ನು ತಡೀಬೇಕು .ನಮ್ಮ ಭಾರತೀಯ ಸಂಸ್ಕೃತಿ ಕಾಪಾಡಬೇಕು ."ನನಗೆ ಸ್ವಲ್ಪ್ಹ ಹೆದರಿಕೆ ಜಾಸ್ತಿ ಆಯಿತು . ಆದರೂ ಸುಧಾರಿಸಿಕೊಂಡು ಸ್ವಲ್ಪ ಧೈರ್ಯ ಮಾಡಿ "ನಿಮಗೇನರೋ ? ನಮ್ಮ ಅಪ್ಪ ಅಮ್ಮನೇ ಕೇಳೋಲ್ಲ ,ನಿಮ್ಮ ಕೆಲಸ ನೋಡಿಕೊಳ್ರೋ" ಅಂದೆ . ಆಗ ಅಲ್ಲಿದ್ದವನು ಹೊಡೆಯುವ ಹಾಗೆ ಮುಂದೆ ಬಂದು "ಹೈವಾನ್ ,ಜಾಸ್ತಿ ಮಾತಾಡ್ತೀಯ . ಕೈಕಾಲು ಮುರಿದುಬಿಡ್ತೀವಿ . ನೀವು lovers ಆಗಿದ್ದರೆ ತಾಳಿ ಕಟ್ಟು ಮದುವೆ ಆಗಿ ಇಲ್ಲ ನಾವು lovers ಅಲ್ಲಾ ಅಂದ್ರೆ ಅವಳು ಕೈಲ್ಲಿ ರಾಖಿ ಕಟ್ಟಿಸ್ಕೋ ".ಅಂತ ಹೇಳಿದ .

     ನನಗೆ ಏನು ಮಾಡ್ಬೇಕು ಅಂತ ಗೊತ್ತಾಗ್ಲಿಲ್ಲ, ಅವಳ ಮುಖ ನೋಡಿದೆ , ಜೋರಾಗಿ ಅಳುತ್ತಾ ಕುಳಿತಿದ್ದಳು . ಈ ನನ್ನ ಮಕ್ಕಳನ್ನು ಹೊಡೆದು ಹಾಕುವಷ್ಟು ತಾಕತ್ತು ನನಗೂ ಇಲ್ಲ . ಯಾರಾದ್ರು ಫ್ರೆಂಡ್ಸ್ ಗೆ ಫೋನ್ ಮಾಡೋಣ ಅಂತ ಮೊಬೈಲ್ ತೆಗದೆ. ಆಗ್ ಅಲ್ಲಿದ್ದವನು ಕಸಿದುಕೊಂಡು " ಕೈ ಕಾಲು ಸಮೇತ ನೆಟ್ಟಗೆ ಹೋಗ್ಬೇಕು ಅಂದ್ರೆ ,ನಾವು ಹೇಳಿದ ಹಾಗೆ ಮಾಡು .ಒಂದಾ ತಾಳಿ ,ಒಂದಾ ರಾಖಿ " ಅಂತ ಎರಡನ್ನು ಕೈಯಲ್ಲಿ ಇರೋದನ್ನು ತೋರಿಸಿ ಹೇಳಿದ . ನಾನು ಈಗ full ಹೆದರಿದ್ದೆ . " ಸರ್ ಬೇರೆ options ಇಲ್ವಾ .ನಮ್ಮನ್ನ ಬಿಟ್ಟು ಬಿಡಿ ಮನೆಗೆ ಹೋಗ್ತೀವಿ " ಅಂತ ಕೇಳಿಕೊಂಡೆ. ಆಗ ಅಲ್ಲಿದ್ದವನು " options ಕೊಡ್ತಾ ಹೋಗೋಕೆ ಇದು ಕೋಟ್ಯಾಧಿಪತಿ ನಾ ,ಮುಚ್ಚಿಕೊಂಡು ನಾವು ಹೇಳಿದ ಹಾಗೆ ಮಾಡೋ " ಅಂತ ಗದರಿದ . ನಾನೇನೋ ತಾಳಿ ಕಟ್ಟಿ ,ಹನಿಮೂನ್ ಮಾಡೋಕು ರೆಡಿ ಇದ್ದೆ . ಆದ್ರೆ ಅವಳು ? ಅವಳು ಇನ್ನು ಜೋರ್ರಾಗಿ ಅಳುತ್ತಾ "ಶ್ರವಣ್ ತಾಳಿ ಗೀಲೀ ಬೇಡ ಕಾಣೋ ,Please " ಅಂದುಬಿಟ್ಟಳು .ನನಗೆ ದಿಕ್ಕೇ ತೋಚಲಿಲ್ಲ ,ಹಾಗಾದ್ರೆ ರಾಖಿನಾ ?ಆಗ ಅಲ್ಲಿದ್ದವನು ಅವಳ ಹತ್ತಿರ ಹೋಗಿ "ಹಾಗಾದ್ರೆ ರಾಖಿ ಕಟ್ಟು, ಬಿಡ್ತೀವಿ ನಿಮ್ಮನ್ನಾ " ಅಂದ . ಅವಳು ಕೈಗೆ ರಾಖಿ ತೆಗದುಕೊಂಡಳು .ನಾನು ಕಕ್ಕಾಬಿಕ್ಕಿಯಾಗಿ "ಸರ್ ಏನಿದು ," ಅವಳ ಹತ್ತಿರ ತಿರುಗಿ "ಏನ್ ಮಾಡ್ತಾ ಇದೀಯಾ ,ರಾಖಿನಾ " ಅಂತ ಕೇಳಿದೆ . ಆಗ ಅಲ್ಲಿದ್ದವನು " ನಿನ್ನಂತ ಗಾಂಡು ಕಟ್ಟಿಕೊಳ್ಳುವ ಬದಲು ,ಇದು ಎಷ್ಟೋ ವಾಸಿ "ಅಂತ ಬಾಯಿ ಮುಚ್ಚಿಸಿದ . ಅವಳು ಅಳುತ್ತಾ ರಾಖಿ ಕಟ್ಟಿದಳು. ತಕ್ಷಣ ಅಲ್ಲಿದ್ದವನೊಬ್ಬ "ಬೋಲೋ ಶ್ರೀ ರಾಮ್ ಕಿ ಜೈ " ಅಂದ . ಎಲ್ಲರು " ಜೈ " ಅಂದ್ರು . ಆಗ ಎಲ್ಲಿಂದಾನೋ ಪೋಲಿಸ್ ಬಂದರು ಅನ್ನಿಸುತ್ತದೆ . ಆಗ ಅಲ್ಲಿದ್ದವರಲ್ಲಿ ಒಬ್ಬ "ಲೋ ಪೋಲಿಸ್ ಕಾಣೋ " ಅಂತ ಕೂಗಿದೊಡನೆ ಎಲ್ಲರು ಓಡಿ ಹೋದರು .ಪೋಲಿಸ್ ಅವರನ್ನು ಅಟ್ಟಿಸಿಕೊಂಡು ಹೋದರು . ಈ ನನ್ನ ಮಕ್ಕಳು ಪೋಲಿಸ್ ಫಿಲಂ ಗಳಲ್ಲ್ಲಿ ಮಾತ್ರ ಲೇಟ್ ಅಂದು ಕೊಂಡಿದ್ದೆ ನಿಜ ಜೀವನದಲ್ಲೂ ಲೇಟ್ ಅಂತ ಆಗ ಅನ್ನಿಸಿತು. ಅವಳಿನ್ನು ಅಳುತ್ತ ಹಾಗೆಯೇ ನಿಂತಿದ್ದಳು . ಏನು ಮಾತಾಡಲಿಲ್ಲ .ಅವಳನ್ನು ಹಾಗೆ ಆಟೋದಲ್ಲಿ hostel ಗೆ ಕರೆದುಕೊಂಡು ಹೋಗಿ ಬಿಟ್ಟು ಬಂದೆ .ದಾರಿಯ ಲಿ ಏನು ಮಾತಾಡಲಿಲ್ಲ .

      ನಾನೇನೋ ರಾಖಿ ಹಬ್ಬದ ಮಾತ್ರ ರಾಖಿ ಕಟ್ಟಿದರೆ ಬೆಲೆ ,ಹಾಗೆಯೇ ಇದಕ್ಕೆ ಬೆಲೆ ಇಲ್ಲ ಅಂತ ಮನಸಲ್ಲಿ ಅಂದುಕೊಂಡಿದ್ದೆ . ಆದರೆ ಅವಳು ಮಾರನೇ ದಿನ ನಾಲ್ಕು ಪುಟ ಪತ್ರದಲ್ಲಿ ಏನೇನೋ ಕೊರೆದು ,ಕೊನೆಗೆ ಇಲ್ಲಿಗೆ ಎಲ್ಲ ನಿಲ್ಲಿಸಿ ಬಿಡೋಣ ಅಣ್ಣಾ ಅಂತ ಬರೆದಿದ್ದಳು .

     ಆಲ್ಲಿಗೆ ನಮ್ಮಈ ಪ್ರೇಮಕ್ಕೂ full stop ಇಟ್ಟ . Bedroom ತನಕ ಹೋಗಿ ,ಬರೀ ಬಾಗಿಲು ಬಡಿದ ಹಾಗೆ ಆಯಿತು . ಅಲ್ಲಿಗೆ ನಮಗೂ valentines day ಗೂ ಇರುವ ಸಂಭಂದಕ್ಕೆ ತೀಲಾಂಜಲಿ ಬಿಟ್ಟೆ . ಮರಳಿ ಪ್ರಯತ್ನವ ಮಾಡಬೇಕು ನಿಜ ,ಇಷ್ಟೆಲ್ಲಾ ಆದ್ಮೇಲೆ ಮಾಡಿರೆ ದೇವರೇ ಉಗೀತಾನೆ .so ನಾವೀಗ ಎಲ್ಲ ಬಿಟ್ಟು ಒಳ್ಳೆ ಹುಡುಗರು ಆಗೀದೀವಿ . ಅಪ್ಪ ಅಮ್ಮ ತೋರಿಸಿದ ಹುಡುಗೀನ ಮದುವೆ ಆಗಿ ಸುಮ್ಮನಾಗಿಬಿಡೋಣ ಅಂತ ಅಂದು ಕೊಂಡೀದೀನಿ . ಏನಂತೀರ ?



















Ondalla Erdalla Kannada Movie Review

ಚಿತ್ರದುದ್ದಕ್ಕೂ ೬ ಅಡಿ ಹೀರೋಗಳ ಗುಣಗಾನ , ಒಂದಿಷ್ಟು ಬಿ ಸೆಂಟರ್ ಆಡಿಯನ್ಸ್ ಗಮನದಲ್ಲಿ ಇಟ್ಟುಕೊಂಡು ನಾಯಕಿ ಹೊಕ್ಕಳು ತೋರಿಸುವ ಧೃಶ್ಯಗಳು ಇರುವ, ಇಲ್ಲವೇ ಈಗಗಾಲೇ ಕಥೆ...