ಶುಕ್ರವಾರ, ಮಾರ್ಚ್ 9, 2018

ಅವಳು ಪಾಠವಾದಾಗ

ಸೂಚನೆ :ಇಲ್ಲಿ ಬರುವ ಸನ್ನಿವೇಶಗಳಲ್ಲಿ ಕೆಲವೊಂದು  ಕಾಲ್ಪನಿಕ , ಕೆಲವೊಂದು ನಿಜ . ಅದನ್ನು  ತಿಳಿಯುವ  ಗೋಜಿಗೆ ಹೋಗದೇ ಇದ್ದವರು ಮಾತ್ರ ಓದಿ

ಸಣ್ಣವನಿದ್ದಾಗ ನನಗೆ  ಳ , ಲ ,ಸ ,ಷ ,ಶ , ರ ಕಾರ ಉಚ್ಚರಿಸಲು ಬರುತ್ತಾ ಇರಲಿಲ್ಲ . ಎಲ್ಲರೂ ನನ್ನ ಕರೆದು ,ಮಾತಾಡಲು ಹೇಳಿ ಮಜಾ ತೆಗೆದುಕೊಳ್ಳುವುದೇ ಜಾಸ್ತಿ . ಅಮ್ಮ ತಿದ್ದಲು ಪ್ರಯತ್ನ ಪಟ್ಟಿದ್ದರೂ , ನಾನು ಕಲಿಯದೇ ಇದ್ದಾಗ  ಇನ್ನು ಚಿಕ್ಕವನು ಎಂದು ಸುಮ್ಮನ್ನಿದ್ದಳು .ನನಗಿನ್ನು ನೆನಪಿದೆ, ಒಮ್ಮೆ ಬೆಂಗಳೂರಿನಲ್ಲಿ ಯಾವುದೋ ಕೆಲಸದ ಮೇಲೆ  ಹೋದಾಗ , ನೆಂಟರೊಬ್ಬರ ಕಾರ್ ಹತ್ತಿದ್ದೆವು . ಕಾರ್ ಉದ್ದಕ್ಕೂ ನನ್ನ ಮಾವಂದಿರು ನನ್ನ ಮಾತಾಡಿಸಿ , ನಾನು ತಪ್ಪು ಉಚ್ಛರಿಸಿದಾಗ ನಕ್ಕು ನಕ್ಕು ಇಟ್ಟಿದ್ದರು  . ಅಮ್ಮನಿಗೆ ಇದನ್ನು  ಸಹಿಸಲು ಆಗಲಿಲ್ಲ .
           ಊರಿಗೆ ಹಿಂದುರಿಗಿದ ನಂತರ  ಅಮ್ಮ  , ಛಲ ಹಿಡಿದ ಕಾಳಿಯಂತೆ  ನನ್ನ ಬಾಯಲ್ಲಿ ಸರಿಯಾದ  ಉಚ್ಚಾರಣೆ  ತರಿಸುವ ಪಣ ತೊಟ್ಟಳು . ಅದೆಷ್ಟು ಕೋಲು , ಸ್ಕೇಲ್ ಮುರಿದಿದೆಯೋ ನಾ ಕಾಣೆ .ಅವಳೇ  ದಿನಾ ರಾತ್ರಿ ಕಣ್ಣೀರಿಡುತ್ತಾ ಮದ್ದು ಹಚ್ಚುತ್ತಾ  ಇದ್ದಳು . ಅವಳ ಈ ಸ್ವಭಾವ ಕಂಡು ನನಗೆ  ಸಿಟ್ಟು ಬರುತ್ತಾ ಇತ್ತು ..
                                          ಕಾಲೇಜ್ನಲ್ಲಿ ಯಾವುದೋ ಸಮಾರಂಭ .  "ಶ್ರವಣ್ ಮತ್ತು ತಂಡದವರಿಂದ ಇದೀಗ ನಾಟಕ " ಎಂದು ಕೂಗಿದರು . ನಾನು ವೇದಿಕೆ ಏರಿದೆ . ಹುಡುಗರು ಜೋರಾಗಿ ಕಿರುಚಿದರು . ನನ್ನ ಜಂಘಾಬಲವೇ ಕುಸಿದಂತಾಗಿ , ಒಮ್ಮಲೇ ಉಸಿರು ತೆಗದು ಕೊಂಡು ಜೋರಾಗಿ ಒಂದು ಪ್ಯಾರಾಗ್ರಾಫ್ ಅಷ್ಟು  dialog ಹೊಡೆದೆ . ರ ,ಳ , ಲ ,ಷ ,ಸ ,ಶ ಎಲ್ಲವು ಪರ್ಫೆಕ್ಟ್ . ಮುಂದೆ ೧೫ ನಿಮಿಷ  ಹುಡುಗರು ನಮ್ಮ ಕಿರುನಾಟಕವನ್ನು ಸಕತ್ enjoy ಮಾಡಿದರು . ನಾ ಆವತ್ತು ನಿರರ್ಗಳವಾಗಿ dialog ಹೊಡೆದು , ಹುಡುಗರನ್ನು ಮೆಚ್ಚಿಸದೇ ಇದ್ದರೆ, ಕಥೆಯೇ ಬೇರೆಯದಾಗಿ ಇರುತ್ತಿತ್ತು .  ನಾಟಕ ಮುಗಿಸಿ ಬಂದವನಿಗೆ ನಾಲ್ಕೈದು ಜನ ಬಂದು "ಏನ್ ಡೈಲಾಗ್ ಹೊಡಿತ್ಯಾ ಗುರು " ಎಂದು ಹೇಳಿದಾಗ ಅಮ್ಮ ನೆನಪಾದಳು ...
---------------------------------------------------------------------------------------------------------------------------------

Second Puc  ಓದುತ್ತಾ  ಇದ್ದ ಸಮಯ . ಇಂಗ್ಲಿಷ್ ಪಿರಿಯಡ್ .ಅದೇನೋ ಮಾತಿನ ಮಧ್ಯೆ ಮೇಡಂ "ನೆನ್ನೆ ೧೮ ಜನ ಮುಂಬೈ ಅಲ್ಲಿ ಸತ್ತ ವಿಷಯ ಯಾರಾದರು ಓದಿದ್ರಾ ?"  ಅಂತ ಕೇಳಿದರು . ನಾನು ತಕ್ಷಣ ಜಾಗೃತನಾಗಿ "ಹೌದು mam , ಅದ್ರಲ್ಲಿ  8 ಜನ ಕನ್ನಡಿಗರು ಪಾಪ " ಎಂದೆ . ಮೇಡಂ "ಸ್ಟುಪಿಡ್ ,ಆ ೧೮ ಜನ ಮನುಷ್ಯರು ".  ಹುಟ್ಟುವ ಮೊದಲು ಇರುವ , ಸತ್ತ ಮೇಲೆ ಹೋಗುವ ಲೋಕದಲ್ಲಿ ನಾವೆಲ್ಲಾ ಒಂದೇ ಅನ್ನುವ ಪಾಠ ಕಲಿತೆ , ಆ ಒಂದು ಸಾಲಿನಿಂದ .
---------------------------------------------------------------------------------------------------------------------------
ಅವಳ ಮದುವೆಯಾದ ಮೇಲೆ , ಇದೇ ಮೊದಲ ಬಾರಿ ಸಿಕ್ಕಿದ್ದಳು. ಯಾಕೋ ನಗು ಇರಲಿಲ್ಲ  ,ಅವಳ ಮುಖದಲ್ಲಿ . ಏನಾಯಿತು ಅಂತ ವಿಚಾರಿಸಿದಾಗ , ತನ್ನ ಕಥೆ ಹೇಳಲು ಶುರು ಮಾಡಿದಳು .ಅವಳ  ಮಾವನ ಮನೆಯಲ್ಲಿ , ಈಕೆ  ಗಂಡನಿಗೆ ಹೆಸರಿಟ್ಟು ,ಏಕವಚನದಿಂದ ಕರೆಯುವುದು ದೊಡ್ಡ ಸಮಸ್ಯೆ ಆಗಿತ್ತು . ಅದಕ್ಕೆ ಈಕೆಯ ಅಮ್ಮ , ಅಪ್ಪ ಕೊನೆಗೆ ಮಾವನ ಮನೆಯವರ ಮುಂದೆ ಆದರೂ ರೀ ಅಂತ ಗಂಡನಿಗೆ  ಕರಿ, ಒಬ್ಬರೇ ಇದ್ದಾಗ ಏನು ಬೇಕಾದರೂ  ಹೇಳ್ಕೋ ಅಂತ ಸಲಹೆ ಕೊಟ್ಟಿದ್ದರು . ಇವಳದು ಒಂದೇ ಹಠ ,ಹಿಂದೊಂದು ಮುಂದೊಂದು ಮಾಡೋಕೆ ನನಗೆ ಇಷ್ಟ ಇಲ್ಲ . ನಾನು ಹೀಗೆ ಇರುತ್ತೇನೆ ಅಂತ . ಒಬ್ಬರನ್ನು ಮೆಚ್ಚಿಸಲು ಕೆಲವೊಮ್ಮೆ ನಾವು ಏನೆಲ್ಲಾ ನಾಟಕ ಮಾಡುತ್ತೇವೆ . ಅವಳು ಹಾಗಿರಲಿಲ್ಲ . ಹಾಗಾಗಲೂ ಒಪ್ಪಲಿಲ್ಲ ..
----------------------------------------------------------------------------------------------------------------------------
ಅವಳು ನಮ್ಮ ಕಾಲೇಜ್ ನ ಸುಂದರಿ . ಸ್ವಲ್ಪ ಜಂಭ ಇತ್ತು ಅನ್ನಿ . ನಾವು ಏನು ಕಮ್ಮಿ ಇರ್ಲಿಲ್ಲ .  ನಮ್ಮಿಬ್ಬರ ಸಂಬಂಧ ಎಣ್ಣೆ ಸೀಗೆಕಾಯಿ . ಒಂದು ದಿನ ಹೀಗೆ ಕೋಪ ನೆತ್ತಿಗೇರಿ ಕ್ಲಾಸ್ ನಲ್ಲಿ ಎಲ್ಲರ ಮುಂದೆ  ಅವಳನ್ನು ಹಿಗ್ಗಾ ಮುಗ್ಗಾ ಬಯ್ದಿದ್ದೆ . ಅಂತಹ ಬಾಯಿ ಬಡಕಿಯನ್ನು ಸುಮ್ಮನಾಗಿಸಿದೆ ಅಂತ ಬೇರೆಯವರ ಮುಂದೆ ಹೇಳಿ ಕೊಚ್ಚಿ ಕೊಂಡಿದ್ದು ಇದೆ . ಅದಾದ ಮೇಲೆ ನಾವು ಕಾಲೇಜ್ ಮುಗಿಯುವ ತನಕ ಮಾತಾಡಲೇ ಇಲ್ಲ . ಕಾಲೇಜ್ ಮುಗಿದ ಮೇಲೂ ನಾವು ಸಿಗಲಿಲ್ಲ , ಅದರ  ಗೋಜಿಗೂ ಹೋಗಲಿಲ್ಲ .
                 ಇದಾಗಿ ಹಲವು ವರ್ಷ ಕಳೆದಿರಬೇಕು . ನನಗೆ ಅಂದು ಆ  ಸನ್ನಿವೇಶದಲ್ಲಿ ನಾನು ನಡೆದುಕೊಂದದ್ದು ತಪ್ಪು ಅನ್ನುವಷ್ಟು mature ಆಗಿದ್ದೆ .  ಅವಳೇನಾದ್ರೂ ಮುಂದೆ ಬಂದರೆ ತಲೆ ತಗ್ಗುವಷ್ಟು ಪಶ್ಚಾತಾಪ ಇತ್ತು . ಒಂದು ದಿನ ಹೀಗೆ ಅಚಾನಕ್ಕಾಗಿ ನಾನು ಅಂಡಮಾನ್ ಟೂರ್ ಗೆ ಹೋದಾಗ ಸಿಕ್ಕಿ ಬಿಟ್ಟಳು . ನನ್ನ ನೋಡಿ ಹಿಗ್ಗಿದಂತಾಗಿ   , ತನ್ನ ಮನೆಯವರಿಗೆಲ್ಲಾ  ಪರಿಚಯ ಮಾಡಿಸಿದಳು . ತನ್ನ ಮನೆಗೂ ಬರಲೇಬೇಕು ಅಂತ ಒತ್ತಾಯ ಬೇರೆ . ಅವಳಿಂದ ಇಂತಹ ಪ್ರತಿಕ್ರಿಯೆ ನಾನು ನಿರೀಕ್ಷಿಸಿಯೇ ಇರಲಿಲ್ಲ . ನನ್ನ ಪ್ರಕಾರ ಮುಂದೊಂದು ದಿನ ನಾವೇನಾದ್ರೂ ಭೇಟಿಯಾದರೆ ಮನಸಿನಲ್ಲಿ ಅಸಡ್ಡೆ ,ಹಳೆಯ ಕಹಿ ನೆನಪುಗಳನ್ನು ತುಂಬಿಕೊಂಡು ಒಂದು ಹುಸಿ ಮಂದಹಾಸ ಬೀರಿ  ಮುಂದೆ ಹೋಗುತ್ತೇವೆ ಅಂದುಕೊಂಡಿದ್ದೆ . ಅವಳು ಹಾಗೆ ಮಾಡಲಿಲ್ಲ .ಅದನ್ನು  ಮರೆತಿದ್ದಳು ಅನ್ನಿಸುತ್ತದೆ  ಅಥವಾ ಕ್ಷಮಿಸಿರಬೇಕು .
---------------------------------------------------------------------------------------------------------------------------
ಇಂಜಿನಿಯರಿಂಗ್ ಓದುತ್ತಿರುವಾಗ ನಾವಿಬ್ಬರು ಸಿಕ್ಕಾಪಟ್ಟೆ ಕ್ಲೋಸ್ .  ಆದರು ಒಮ್ಮೆ ಯಾವುದೋ ವಿಷಯದಲ್ಲಿ ನನಗೆ ಅವಳು support ಮಾಡಲಿಲ್ಲ . ಒಳ್ಳೆ ನಾಗರಹಾವು ಸೇಡು ತೀರಿಸಿಕೊಳ್ಳುವಂತೆ ಅವಳನ್ನು ಕಾಡಿ , ಅವಳಿಗೆ ಬೇಸರ ತರಿಸಿದ್ದೆ . ನಾವಿಬ್ಬರು ಒಂದೇ ಪ್ರಾಜೆಕ್ಟ್ team ಅಲ್ಲಿ ಇದ್ದ ಕಾರಣ ,ಒಟ್ಟಿಗೆ ಕೆಲಸ ಮಾಡಲೇಬೇಕಿತ್ತು . ನನಗಿನ್ನು ಅವಳ ಮೇಲಿನ ಕೋಪ ಕಡಿಮೆ ಆಗಿರಲಿಲ್ಲ . ಅದೊಂದು ಪ್ರಾಜೆಕ್ಟ್ ಕೆಲಸ ಮಾಡುತ್ತಾ ಮಾಡುತ್ತಾ ನಾನು ಹಾಸ್ಟೆಲ್ ಗೆ ,ಊಟಕ್ಕೆ ಹೋಗಲಾಗಲಿಲ್ಲ .
ಹೊರಗಡೆ ತಿನ್ನಲು ದುಡ್ಡು ಇರಲಿಲ್ಲ . ನನಗೆ ಹಸಿವು ಜಾಸ್ತಿ ಅಂತ ಅವಳಿಗೆ  ಗೊತ್ತು . ತನ್ನ ಹಾಸ್ಟೆಲ್ ಇಂದ ನನಗೂ ಒಂದು ಬಾಕ್ಸ್ ಊಟ ತಂದಿದ್ದಳು . ನನ್ನ ಮುಂದೆ ಇಟ್ಟು ತಿನ್ನು ಅಂದಳು . ನಾನು ಕೋಪದಿಂದ ಬೇಡ ಅಂದೆ. ಆಕೆ "ನಿನ್ನ ಕೋಪ ಎಲ್ಲ ಊಟದ್ದ ಮೇಲೆ ಹಾಕಬೇಡ , ಜಾಡ್ಸಿ ಓದಿತೀನಿ ,ಮುಚ್ಕೊಂಡು ತಿನ್ನು ".  ಆ ದಿನ ಊಟ ಗಬಗಬನೆ  ತಿನ್ನುವಾಗ, ನನ್ನ ಕಣ್ಣಂಚಲ್ಲಿ ನೀರು .
---------------------------------------------------------------------------------------------------------------------------
ಅಮ್ಮನ ಹೆರಿಗೆ ಸಮಯ.ಆಕೆ ತವರಿಗೆ ಹೋಗಿದ್ದಳು  . ಅಜ್ಜಿ ನನ್ನ ನೋಡಿಕೊಳ್ಳಲು  ಬಂದಿದ್ದಳು . ಒಂದು ದಿನ ಬುತ್ತಿ ಮರೆತು ಶಾಲೆಗೆ  ಹೋಗಿದ್ದೆ . ಯಾವುದೋ ಪಿರಿಯಡ್ ಮಧ್ಯೆ  ನನ್ನಜ್ಜಿಯ ಸದ್ದು ಕೇಳಿತು .   ಬಾಗಿಲ ಹತ್ತಿರ ತಿರುಗಿ ನೋಡಿದರೆ ,ನನ್ನಜ್ಜಿ ಬುತ್ತಿ ಹಿಡಿದು ನಿಂತಿದ್ದಾಳೆ . "ಶ್ರವಣ್ ಬೇಕಿತ್ತು " ಅಂದಳು . ಮಿಸ್ ಗೆ ಪರಿಸ್ಥಿತಿ ಅರಿವಾಗಿ   ನನಗೆ  ಎದ್ದು ಹೋಗಿ ಬುತ್ತಿ ತೆಗದು ಕೊಂಡು ಬರಲು ಹೇಳಿದರು .  ಸಕ್ಕರೆ ಕಾಯಿಲೆ ಬಂದು ಸರಿಯಾಗಿ ಕಣ್ಣು ಕಾಣದ ಅಜ್ಜಿ , ಅದೂ  ಸ್ಟೇಟ್ ಹೈವೇ ಪಕ್ಕದಲ್ಲಿರುವ ನನ್ನ ಶಾಲೆಗೆ ಹೇಗೆ ಬಂದಳು ಅಂತ ಆಶ್ಚರ್ಯ ಪಡುತ್ತಲೇ ನಾನು ಅಜ್ಜಿ ಹತ್ತಿರ ಹೋದೆ . ಅಜ್ಜಿ ನನಗೆ ಬುತ್ತಿ ಕೊಟ್ಟು , ನನ್ನ ಗಟ್ಟಿ ತಬ್ಬಿ ಹಿಡಿದು ಹಣೆಗೆ ಮುತ್ತು  ಕೊಟ್ಟಳು . ಕ್ಲಾಸ್ನಲ್ಲಿ ಎಲ್ಲರೂ ನನ್ನನ್ನೇ  ನೋಡುತ್ತಾ ಇದ್ದರು ,ನನಗೆ ನಾಚಿಕೆ ಆಗಲಿಲ್ಲ . ಅಂದು ನನ್ನಜ್ಜಿಯ ಬೆಚ್ಚನೆಯ ಅಪ್ಪುಗೆ, ಪ್ರೀತಿಯ ಪಾಠ ಹೇಳಿಕೊಟ್ಟಿತ್ತು .

                                                                                                         --ಶ್ರವಣ್


Above author writes incidents where he has learnt lessons from women.The incident revolves around his mother, granny and some of his college friends.Happy international women's day .






Ondalla Erdalla Kannada Movie Review

ಚಿತ್ರದುದ್ದಕ್ಕೂ ೬ ಅಡಿ ಹೀರೋಗಳ ಗುಣಗಾನ , ಒಂದಿಷ್ಟು ಬಿ ಸೆಂಟರ್ ಆಡಿಯನ್ಸ್ ಗಮನದಲ್ಲಿ ಇಟ್ಟುಕೊಂಡು ನಾಯಕಿ ಹೊಕ್ಕಳು ತೋರಿಸುವ ಧೃಶ್ಯಗಳು ಇರುವ, ಇಲ್ಲವೇ ಈಗಗಾಲೇ ಕಥೆ...