ಸೋಮವಾರ, ಮೇ 20, 2013

ತಲೆಕೆಟ್ಟು ಬರೆದ ಕವನಗಳು






ಸಾಮಾನ್ಯ ಪ್ರಜೆ 

ಚುನಾವಣೆಯಲ್ಲಿ 
ಗೆಲ್ಲುವ ಮೊದಲು 
ರಾಜಕಾರಣಿಗೆಲ್ಲಾ 
ದೇವರು ಇವನೇ ,
ಗೆದ್ದ ಮೇಲೆ 
ಕೇಳುವವರಿಲ್ಲ
ಇವನ ಬವಣೆ 


ರೋಗ 

ವೈದ್ಯರು ಹೇಳಿದ್ದಾರೆ
ನನಗೆ ಅದ್ಯಾವುದೋ
ವಿಚಿತ್ರ ರೋಗ ಅಂತೆ .
ಅದಕೆ ಅವರು ಬರೆದು
ಕೊಟ್ಟ ಮದ್ದು ,
ನಿನ್ನ ಬಳಿ
ಮಾತ್ರ ಸಿಗುವುದಂತೆ . 

ಆಸೆ

ನಲ್ಲೆ ಸಂದೇಶ ಕಳಿಸಿದಳು 
" ಕರೆ ಮಾಡುವೆಯಾ ?
ನನಗೆ ನಿನ್ನ ಜೊತೆ
ಮಾತನಾಡುವ ಆಸೆ "
ತಕ್ಷಣ ನಲ್ಲ
ಸಂದೇಶ ಕಳುಹಿಸಿದನು
" ನನಗೂ ಅಷ್ಟೇ ,
ಅದರೇನು ಮಾಡಲಿ 
ಮೊಬೈಲಿನಲ್ಲಿ ಕರೆನ್ಸಿ
ಇಲ್ಲ ಒಂದೇ ಒಂದು ಪೈಸೆ ".

ಮಾಯೆ 

ಗೂಗಲ್ ಹುಡುಕಾಟದಲ್ಲಿ
ಹೆಸರು ಕೊಟ್ಟು
ನೋಡಿದರೆ ನನ್ನದು ,
ಏನಾಶ್ಚರ್ಯ ?
ಫಲಿತಾಂಶಗಳಲ್ಲಿ
ಬರಬೇಕೇ ಹೆಸರು
ಬರೀ ನಿನ್ನದು .


ನೀನು 

ನನ್ನೆದೆಯ
ಕಪ್ಪೆಚಿಪ್ಪಿನೊಳಗೆ ,
ಪ್ರೀತಿಯೆಂಬ
ಸ್ವಾತಿಮುತ್ತಿನ
ಮಳೆ ಹನಿ
ಸೇರಿ ರೂಪು
ತಾಳಿದ ಮುತ್ತು . 
  
ಸಕ್ಕರೆ 

ಕಾಫೀಗೆ ಅದೇಕೆ 
ಬೇಕು ಸಕ್ಕರೆ ,
ಸಾಕು ನಿನ್ನ ಬೆರಳು 
ಅದರೊಳಗೆ ಅದ್ದು ಕೊಟ್ಟರೆ . 


ಜಂಪಿಂಗ್ ಸ್ಟಾರ್

ನಟಿಯೊಬ್ಬರಿಗೆ 
ಯಾರೋ ಕೇಳಿದರು 
"ನೀವು ಪಕ್ಷದಿಂದ 
ಪಕ್ಷಕ್ಕೆ ಹಾರಲು
 ಏನು ಕಾರಣ? ". 
ಅದಕ್ಕೆ ಆಕೆ 
ಉತ್ತರಿಸಿದಳು
 "ಪಕ್ಷದ ಚಿಹ್ನೆಯ 
ಬಣ್ಣ ನನ್ನ ಬಟ್ಟೆಗೆ
 ಮ್ಯಾಚ್ ಆಗದಿದ್ದರೆ 
ಇನ್ನೇನು ಮಾಡೋಣ ?"




ಮಾದಕ ಸೌಂದರ್ಯ

ತಾಪಮಾನ ಹೆಚ್ಚಲು 
ಅದೇಕೆ ಬೇಕು ಸೂರ್ಯ ,
ಹಿಮದ ಚಳಿಯಲ್ಲೂ
ನಿನ್ನ ನೋಡಿದವರ 
ತಾಪಮಾನ ಹೆಚ್ಚಿಸುವುದು
 ನಿನ್ನ ಈ ಮಾದಕ ಸೌಂದರ್ಯ . .

ಶನಿವಾರ, ಮೇ 18, 2013

ಬಾಲ್ಡಿಗಳ ಲೋಕದಲ್ಲಿ ....



                      ಎಲ್ಲಿ ನೋಡಿದರಲ್ಲಿ ಅವುಗಳದೇ ರಾಶಿ ..ಮೂಲೆ ಮೂಲೆಗಳಲ್ಲಿ ... ನಡುವಿನಲ್ಲಿ .ಅನಾಥ ಶವಗಳಂತೆ ಬಿದ್ದಿದ್ದವು .. ಅಂತೆ ಏನು ಅವೆಲ್ಲಾ ಅನಾಥ ಶವಗಳೇ ... ನಾನು ಅವುಗಳ ಮಧ್ಯೆ ಯುಧ್ಧ ಮುಗಿದ ಮೇಲೆ , ಯುಧ್ಧದಲ್ಲಿ ಮಡಿದ ಎರಡು ಸೈನ್ಯದ ಸೈನಿಕರ ಹೆಣಗಳ ನಡುವೆ ಪಶ್ಚಾತಾಪದ ಬೇಗೆಯಲ್ಲಿ ಬೇಯುತ್ತಿದ್ದ ನಿಸ್ಸಹಾಯಕ ಅಶೋಕ ಚಕ್ರವರ್ತಿಯಂತೆ ನಿಂತಿದ್ದೆ . ಕಳೆದ ಒಂದಿಷ್ಟು ತಿಂಗಳಿಂದ ಈ ಮಾರಣ ಹೋಮ ನಡೆಯುತ್ತಲೇ ಇದೆ . ಬೆಳಿಗ್ಗೆಯಿಂದ ಜೀವ ಕಳೆದುಕೊಂಡಿರುವ ಸಂಖ್ಯೆ ಅದಾಗಲೇ ಐವತ್ತಿಂದ ನೂರಿರಬಹುದು . ನನ್ನಿಂದ ಏನು ಮಾಡಿದರೂ ಇದನ್ನು ನಿಲ್ಲಿಸಲಾಗುತ್ತಿಲ್ಲ. ಕನ್ನಡಿ ಮುಂದೆ ನನ್ನನು ನಾನೇ ನಿಂತು ನೋಡಿಕೊಂಡೆ . ಇದು ಹೀಗೆ ಮುಂದುವರಿದರೆ ನನ್ನ ಮುಂದಿನ ಗತಿಯೇನು ? ಕನ್ನಡಿಯಲ್ಲಿ ನನ್ನ ಭವಿಷ್ಯದ ರೂಪ ನನ್ನನ್ನು ನೋಡಿ ನಗುತಿತ್ತು ." ನಿನ್ನ ಕಥೆ ಇಷ್ಟೇ ,ಇನ್ನು ಏನು ಮಾಡಿದರೂ ಇದನ್ನು ನಿಲ್ಲಿಸಲಾಗುವುದಿಲ್ಲ .. ನನ್ನಂತೆ ನೀನು ಆಗಲೇಬೇಕು " . ಹೌದು , ಅನ್ನಿಸಿತು ನನಗೆ .

                                 ನಾನು ಈಗಷ್ಟೇ ಬಾಚಿಕೊಂಡ ಬಾಚಣಿಗೆಯನ್ನು ನೋಡಿದೆ . ಒಂದು ಅರ್ಧ ನಿಮಿಷ ಬಾಚಿ ಕೊಂಡಿರಬಹುದೇನೋ ಅದಾಗಲೇ ಬಾಚಣಿಗೆಯಲ್ಲಿ ರಥದ ಚಕ್ರದ ಅಡಿಗೆ ಸಿಕ್ಕಿ ಸತ್ತ ಸೈನಿಕರಂತೆ ಒಂದಿಷ್ಟು ಸಿಕ್ಕಿಹಾಕಿಕೊಂಡಿದ್ದವು . ಕನ್ನಡಿಯ ಮುಂದೆ ಒಂದಿಷ್ಟು . ರೂಮನ್ನು ಮತ್ತೊಮ್ಮೆ ನೋಡಿದೆ ಎಲ್ಲೆಂದರಲ್ಲಿ ಅನಾಥ ಶವಗಳಂತೆ ತಲೆಯಿಂದ ಉದುರಿ ಬಿದ್ದಿರುವ ,ಈಗಷ್ಟೇ ಉದುರಿ ಬೀಳುತ್ತಿರುವ ಬಹುಷಃ ಇನ್ನು ಮುಂದೆ ಉದುರಿ ಬೀಳಲು ಇರದೇ ಹೋಗುವ ಕೂದಲುಗಳೇ ಕಾಣಿಸುತ್ತಿವೆ . ಏನು ಮಾಡುವುದು ಎಂಬುದು ತೋಚದೆ ಅಲ್ಲೇ ದೊಪ್ಪೆಂದು  ಕುಳಿತೆ . ಏನನ್ನಿಸಿತೋ ಎನೋ ಎದ್ದು ,ತಕ್ಷಣ ಕಸ್ಪರಿಕೆಯನ್ನು ತೆಗದು ಇಡೀ ಕೋಣೆಯನ್ನು ಗುಡಿಸಿದೆ . ಸುಮಾರು ದಿನಗಳಿಂದ ನನ್ನ ಕೋಣೆಯನ್ನು ಸ್ವಚ್ಚವಾಗಿ ಇಟ್ಟುಕೊಳ್ಳಲು ಇದೇ ಕಾರಣವಿರಬಹುದು . ಇಲ್ಲದೆ ಇದ್ದಲ್ಲಿ  ಮಂಡಿಪೇಟೆಯಲ್ಲಿ ಮಂಗಳವಾರ ಸಂತೆ ಮುಗಿದ ಮೇಲೆ ಇರುವಷ್ಟು ಗಲೀಜು ನನ್ನ ಕೋಣೆಯಲ್ಲಿ ಇರುತಿತ್ತು . ಆದರೆ ಈಗ ಕೆಲವು ದಿನಗಳಿಂದ ನ್ಯೂ ಯಾರ್ಕ್ ಮೇನ್ ರೋಡ್ ನಂತೆ ಫಳ ಫಳ ಹೊಳೆಯುತ್ತಿದೆ . ಗುಡಿಸಿದ ಮೇಲೆ ಕಸವನ್ನು ಒಟ್ಟು ನೋಡಿದರೆ ಅದರಲ್ಲಿ ಬಹು ಪಾಲು  ಕೂದಲುಗಳೇ  ಇವೆ .

             ಮತ್ತೆ ಬಂದು ಕನ್ನಡಿ ಮುಂದೆ ನಿಂತೆ .ನನ್ನನ್ನೇ ನಾನು ನೋಡಿಕೊಂಡೆ .ಮುಖವನ್ನು ಕನ್ನಡಿಯ ಹತ್ತಿರ ಹೋಗಿ ನೋಡಿಕೊಂಡೆ . ಹಣೆಯ ಮೇಲ್ಭಾಗದ ಎಡ ಹಾಗೂ ಬಲ ತುದಿ ಅದಾಗಲೇ ಹುಲ್ಲುಗಳು ಇಲ್ಲದ ದಾರಿಗಳಂತೆ ಆಗಲು ಶುರು ವಾಗಿದೆ . ತಲೆಯ ಮೇಲ್ಭಾಗದಲ್ಲೂ ಮೊದಲಿದ್ದಷ್ಟು ಕೂದಲುಗಳು ಇಲ್ಲ . ತಲೆಯ ಹಿಂಭಾಗ ಕಾಣಿಸುತ್ತಿಲ್ಲ . ತಕ್ಷಣ ಉಪಾಯವೊಂದು ,ಹೊಳೆದು ಮೊಬೈಲ್ ತೆಗದು ಕೊಂಡೆ . ನನ್ನ ತಲೆಯ ಹಿಂಭಾಗ ದ ಚಿತ್ರ ತೆಗದು ನೋಡಿದರೆ ಅಲ್ಲಿ ಅದಾಗಲೇ 30-40 ಸೈಟು . ತುಂಬಾ ದಿನದಿಂದ ಸೈಟು ತೆಗದು ಕೊಳ್ಳಬೇಕೆಂಬ ಅಸೆ ಇತ್ತು . ದೇವರು ಹೀಗೆ ಆ ಆಸೆಯನ್ನು ತೀರಿಸುತ್ತಿದ್ದಾನೆ ಅನ್ನಿಸಿತು . ಆಗ ತಕ್ಷಣ ನನ್ನ ಭವಿಷ್ಯದ ರೂಪ ಮತ್ತೆ ಕನ್ನಡಿಯಲ್ಲಿ ಕಾಣಿಸಿತು . ಅದಕ್ಕೆ ತಲೆಯಲ್ಲಿ ಕೂದಲೇ ಇಲ್ಲ . " ಎಷ್ಟು ಗುಡಿಸಿದರೇನು ?ಮತ್ತೆ ಮತ್ತೇ ಅವುಗಳು ಉದುರಿಯೇ ಉದುರುತ್ತವೆ  . ನೀನು ನನ್ನಂತೆ ಆಗಿಯೇ ಆಗುತ್ತೀಯಾ?" ಎಂದು ಹೇಳುತ್ತಾ ಗಹಿಗಹಿಸಿ ನಗುತ್ತಿದೆ . ನನಗೆ ಹೆದರಿಕೆ ಆಗ ತೊಡಗಿತು . ಪರ್ಸ್ , ಮೊಬೈಲ್ ತೆಗದು ಕೊಂಡು , ಚಪ್ಪಲಿ ಹಾಕಿಕೊಂಡು ಹೊರಗಡೆ ಹೊರಟೆ .

                     ಅದೇನೋ ಗೊತ್ತಿಲ್ಲಾ ನಂಗೆ ಮೊದಲಿನಿಂದಲೂ ಕೂದಲ ಬಗ್ಗೆ ವ್ಯಾಮೋಹ . ಬಾಲ್ಡಿ ತಲೆಗಳನ್ನು ನೋಡಿದರೆ ನಗು ಬರುತಿತ್ತು . ಆದರೆ ಅದಕ್ಕಿಂತ ತುಂಬಾ ಹೆದರಿಕೆಯಾಗುತ್ತಿತ್ತು ಕೂಡ . ಎಲ್ಲಿ ,ನಾನು ಅವರಂತೆ ಆಗಿಬಿಡುತ್ತೀನೋ ಎಂದು . ನನಗೆ ತಲೆ ತುಂಬಾ ಕೂದಲು ಅಂದರೆ ಸೌಂದರ್ಯದ ಪ್ರತೀಕ . ಅದು ಇಲ್ಲದವರು ಹಾಸ್ಯದ ಪ್ರತೀಕಗಳು ಎಂಬುದು ನನ್ನ ಅನಿಸಿಕೆ ಯಾಗಿತ್ತು . ಅಮ್ಮ ಯಾವಾಗಲೂ ಹೇಳುತ್ತಿದಳು . ಚಿಕ್ಕವನಿದ್ದಾಗ ಯಾರೋ ಬಾಲ್ಡಿ ಅಂಕಲ್ ನನ್ನ ತಲೆ ಮೇಲೆ ಕೈ ಅಲ್ಲಾಡಿಸುತ್ತ ಹೇಳಿದ್ದರಂತೆ " ಪುಟ್ಟ ಈಗ ಒಳ್ಳೆ ಕೂದಲು ಕಾಡು ಥರಹ ಬೆಳೆದಿದೆ . ಮುಂದೆ ನನ್ನ ಥರ ಆಗುತ್ತೀಯ ಆಗ ಏನು ಮಾಡುತ್ತೀಯ ? " ಅಂತ . ಅಷ್ಟಕ್ಕೇ ನಾನು ಹೆದರಿ ಗೊಳೋ ಎಂದು ಅತ್ತು ಕರೆದು . ತುಂಬಾ ದಿನಗಳು  ಅವರನ್ನು ಮಾತನಾಡಿಸುವುದೇ ಬಿಟ್ಟಿದ್ದೆ ಅಂತೆ . ಆ ಅಂಕಲ್ ಕಣ್ಣು ಹಾಕಿದ್ದರ ಫಲವೇನೋ ನನಗೆ ಈಗ ಕೂದಲು ಉದುರುತ್ತಿದೆ ಅನ್ನಿಸಿತು .

              ಅಷ್ಟೇ ಅಲ್ಲಾ ಶಾಲೆಯಲ್ಲಿ ಕೂದಲು ಉದುರುವುದು ವಂಶವಾಹಿ ಸಮಸ್ಯೆಗಳಲ್ಲಿ ಒಂದು ನನಗೆ ಪುಸ್ತಕ ದಲ್ಲಿ ಓದಿದಾಗ ಹೆದರಿಕೆ ಯಾಗಿತ್ತು . ಹಲವಾರು ಅವಿಷ್ಕಾರಗಳಂತೆ ಅದು ಸುಳ್ಳು ಇರಬಹುದು ಅಥವಾ ಸುಳ್ಳಾಗಿರಲಿ ಎಂದು ದೇವರ ಹತ್ತಿರ ಪ್ರಾರ್ಥಿಸುತ್ತಿದೆ . ಅಷ್ಟೇ ಏಕೆ ಉತ್ತರ ಪತ್ರಿಕೆಯಲ್ಲಿ ವಂಶವಾಹಿ ಸಮಸ್ಯೆಗಳು ಗುರುತಿಸಿ ಪ್ರಶ್ನೆಗೆ ಅದೊಂದನ್ನು ಬಿಟ್ಟು ಎಲ್ಲಾ ಬರೆದಿದ್ದೆ .ಯಾಕಂದರೆ ಮನೆಯಲ್ಲಿ ಅಪ್ಪನಿಗೆ ಅದಾಗಲೇ ಕೂದಲು ಉದುರುವುದು ಶುರುವಾಗಿತ್ತು . ಎಲ್ಲಿ ನನಗೂ ಮುಂದೆ ಹಾಗೆ ಆಗುತ್ತದೆಯೋ ಎನ್ನುವ ಹೆದರಿಕೆ . ಕಾಲೇಜಿನಲ್ಲಿ ಅದಾಗಲೇ ಕೂದಲು ಉದುರಿದ್ದ ಗೆಳಯನನ್ನು ನಾವೆಲ್ಲಾ ಸಿಕ್ಕ ಪಟ್ಟೆ ಗೋಳು ಹೊಯ್ದುಕೊಳ್ಳುತ್ತಿದ್ದೆವು . ಮೊಟ್ಟೆ , ಕುಂಬಳ ಕಾಯಿ , ಸೊನ್ನೆ ಹೀಗೆ ಯಾವುದೇ ದುಂಡಗಿನ ವಸ್ತು ಸಿಕ್ಕಿದರೆ ಸಾಕು ಅವನ ಮುಖದ ಪಕ್ಕ ಇಟ್ಟು ನಗುತ್ತಿದ್ದೆವು . ಅವನ ಶಾಪ ಏನಾದರು ನನ್ನ ಕೂದಲು ಮೇಲೆ ಪ್ರಭಾವ ಬೀರುತ್ತಿದೆಯಾ ಅನ್ನಿಸಿತು .

              ದಾರಿಯಲ್ಲಿ ಹೋಗುತ್ತಾ ಹೀಗೆ ಅನೇಕ ಯೋಚನೆಗಳು ನನ್ನನ್ನು ಕಾಡ ತೊಡಗಿದವು . ಅಯ್ಯೋ !ಯೋಚನೆ ಮಾಡಿದರೆ ಕೂದಲು ಉದುರುತ್ತವೆ ಅಂತ ಎಲ್ಲಿಯೋ ಓದಿದ್ದು ನೆನಪು . ಯೋಚನೆ ಮಾಡುವುದು ನಿಲ್ಲಿಸಬೇಕು . ಆದರೆ ಹೇಗೆ ?ಆಗ ಮತ್ತೊಂದು ಯೋಚನೆ ಹುಟ್ಟಿಕೊಂಡಿತು . ಅಯ್ಯೋ ಮತ್ತೆ ಎಷ್ಟು ಕೂದಲು ಕಳೆದುಕೊಂಡೆನೋ ಎಂಬ ಮತ್ತೊಂದು ಯೋಚನೆ . ಹೀಗೆ ಒಂದಾದರ ಮೇಲೊಂದು ಯೋಚನೆಗಳ ಸುಳಿಯಲ್ಲಿ ಸಿಕ್ಕಿ ನನ್ನ ಕೂದಲುಗಳು ಉದುರುತ್ತಿವೆ ಅನ್ನಿಸಿತು .

             ಬಸ್ ಬರುವ ಜಾಗ ಬಂದದ್ದರಿಂದ ಅಲ್ಲಿಯೇ ನಿಂತುಕೊಂಡೆ . ಆ ಸಣ್ಣ ನಿಲ್ದಾಣದಲ್ಲಿ ಕುಳಿತಿಕೊಳ್ಳಲು ನಾಲ್ಕೈದು ಕಲ್ಲಿನ ಬೆಂಚು ಗಳಿದ್ದವು . ಖಾಲಿಯಿದ್ದ ಬೆಂಚೊಂದರಲ್ಲಿ ಕುಳಿತು ಬಸ್ ಗೆ ಕಾಯುತ್ತಾ ರಸ್ತೆ ನೋಡುತ್ತಾ ಕುಳಿತೆ . ರಸ್ತೆ ಯಲ್ಲಿ ಚೆನ್ನಾಗಿರುವ ಹುಡುಗಿಯರನ್ನು ಬಿಟ್ಟು ,

              ಹೋಗಿ ಬರುವ ಜನರಲ್ಲಿ ಎಷ್ಟು ಜನ ಬಾಲ್ಡಿಗಳು ಇದ್ದಾರೆ ಎಂದು ನೋಡುತ್ತಿದೆ . ಹತ್ತರಲ್ಲಿ ಐದು ಜನ ಬಾಲ್ದಿಗಳೇ . ಕೆಲವರಿಗೆ ಮುಂದೆ ಕೂದಲು ಇಲ್ಲ .ಕೆಲವರಿಗೆ ಹಿಂದೆ ಇಲ್ಲ . ಕೆಲವರಿಗೆ ಪೂರ್ತಿ ಇಲ್ಲ . ಇವರೆಲ್ಲಾ ನಾನು ಮುಂದೆ ಸೇರುವ ಸಂಘದ ಸದಸ್ಯರು ಅನ್ನಿಸಿತು . ರಸ್ತೆಯ ಇನ್ನೊಂದು ಬದಿ ಆ ಕಡೆಯಿಂದ ಬರುವ ಬಸ್ ಗೆ ಕಾಯುತ್ತ ಒಂದಿಷ್ಟು ಜನ ನಿಂತಿದ್ದರು . ಅದರಲ್ಲಿ ಒಬ್ಬ ಹುಡುಗನ ಸುತ್ತ ನಾಲ್ಕೈದು ಚೆಂದದ ಹುಡುಗಿಯರು ಮಾತನಾಡುತ್ತ ನಗುತ್ತ ನಿಂತಿದ್ದರು . ಸಾಮಾನ್ಯವಾಗಿ ಇಂತಹ ದೃಶ್ಯ ನೋಡಿದಾಗ ನನಗೆ ಅಸೂಯೆ ಮೂಡುತಿತ್ತು . ಆದರೆ ಇಂದು ಹೆದರಿಕೆ ಆಯಿತು . ಯಾಕಂದ್ರೆ ಆ ಗುಂಪಿನ ಪಕ್ಕ ದಲ್ಲಿ ಒಬ್ಬ ವ್ಯಕ್ತಿ ನಿಂತಿದ್ದ . ಬೋಳು ತಲೆಯವನು . ಒಬ್ಬನೇ ನಿಂತಿದ್ದಾನೆ . ಬಹುಶಃ ಅದಕ್ಕೆ ಅವನ ಬೋಳು ತಲೆಯೇ ಕಾರಣವಾ ? ಮತ್ತಷ್ಟು ಹೆದರಿಕೆ ಆಗಿ ಅಲ್ಲಿ ನೋಡುವುದನ್ನು ನಿಲ್ಲಿಸಿ ಪಕ್ಕಕೆ ಮುಖ ತಿರುಗಿಸದೆ .

                      ಆಲ್ಲಿಯೇ ನಿಂತಿದ್ದ ಅಂಕಲ್ ಒಬ್ಬ ನನ್ನನು ನೋಡಿ ಸ್ಮೈಲ್ ಕೊಟ್ಟರು . ನನಗೇಕೋ ವಿಚಿತ್ರ ಅನ್ನಿಸಿತು . ನಾನು ಸಾಮಾನ್ಯವಾಗಿ ಇಲ್ಲಿ ಬಸ್ ಗೆ ಕಾಯುವಾಗ ಆ ಅಂಕಲ್ ನನ್ನು ತುಂಬಾ ಸಲ ನೋಡಿದ್ದೇನೆ . ಅವರು ಸಾಮಾನ್ಯವಾಗಿ ಇಲ್ಲಿಯೇ ಬಸ್ ಗೆ ಕಾಯುವುದು . ಆದರೆ ಯಾವತ್ತು ಮುಖಕ್ಕೆ ಮುಖ ಎದುರಾದಾಗ ನಕ್ಕಿದವರಲ್ಲ . ಇವತ್ತು ಯಾಕೆ ನಕ್ಕಿದರು ಅನ್ನುವುದು ಪ್ರಶ್ನೆ . ಯಾಕಂದೆರೆ ಆ ಅಂಕಲ್ ಬೋಳು ತಲೆಯವರಾಗಿದ್ದರು . ಅವರಿಗೆ ನನ್ನ ಕೂದಲು ಉದುರುತ್ತಿರುವುದು ಗೊತ್ತಗಿರಬಹುದೇನೋ ? ನಮ್ಮ ಸಂಘಕ್ಕೆ ಸ್ವಾಗತ , ನೀನು ನಮ್ಮ ಸಂಘದ ಸದಸ್ಯ ಇಷ್ಟರಲ್ಲೇ ಆಗುತ್ತೀಯ ಎಂದು ಸ್ವಾಗತಿಸುವ ಮಂದಹಾಸ ಅದಾಗಿತ್ತ ಎಂಬ ಪ್ರಶ್ನೆ ಹುಟ್ಟ ತೊಡಗಿತು . ನನಗೆ ಆ ಮನುಷ್ಯ ಅಖಿಲ ಭಾರತ ಬೋಳು ಸಂಘದ ಅಧ್ಯಕ್ಷನಂತೆ ಕಂಡ . ಇಲ್ಲ ನಾನು ಹಾಗಾಗಬಾರದು . ಏನಾದ್ರೂ ಮಾಡಲೇ ಬೇಕು . ಎಲ್ಲ ಸಮಸ್ಯೆಗೆ ಪರಿಹಾರ ಇದ್ದೇ ಇದೆ . ಹೋಗು ಹುಡುಕು , ಮನಸಿದ್ದಲ್ಲಿ ಮಾರ್ಗ . ಹುಡುಕು ಹುಡುಕು .ಏಳು ಎದ್ದೇಳು ಗುರಿ ಮುಟ್ಟುವ ತನಕ ನಿಲ್ಲದಿರು ಎಂಬ ಘೋಷ ವಾಕ್ಯಗಳು ನನ್ನ ಕಿವಿಗೆ ಕೇಳಿಸತೊಡಗಿದವು .

                              ಬಸ್ ಗೆ ಕಾಯುವುದನ್ನು ಬಿಟ್ಟು ಎದ್ದು ನಿಂತೆ . ನಾನು ಹೋಗಬೇಕಾದ ಸ್ಥಳ ಅದಲ್ಲ . ಬೇರೆಯದೇ ಇದೆ ಎಂದು ನಡೆಯಲು ಶುರು ಮಾಡಿದೆ . ತಕ್ಷಣ ಮೊಬೈಲ್ ನಲ್ಲಿ ಕೂದಲು ಉದುರುವಿಕೆಗೆ ಪರಿಹಾರ ಏನು ಎಂಬುದು ಅಂತರ್ಜಾಲದಲ್ಲಿ ಹುಡುಕಿದೆ . ಒಂದು ೧೦ ಸೆಕೆಂಡುಗಳಲ್ಲಿ ಸಾವಿರ ಫಲಿತಾಂಶಗಳು ಬಂದವು .ಒಂದೊಂದೇ ತೆರದು ನೋಡಿದೆ . ಎಲ್ಲ ಜಾಹೀರಾತುಗಳಲ್ಲಿ ಒಂದು ನನ್ನ ಕಣ್ಣು ಕುಕ್ಕಿತು . ಆ ಜಾಹೀರಾತಿನಲ್ಲಿ ಬೋಳು ತಲೆಯೊಬ್ಬ ವ್ಯಕ್ತಿ ಚಿಕಿತ್ಸೆಯ ನಂತರ ಉಪೇಂದ್ರನ ತರಹ ಆಗಿದ್ದನು . ಇದೇ ಸರಿ ಯಾದ ಜಾಗ ನನಗೆ ಅನ್ನಿಸಿತು . ಎಷ್ಟು ಖರ್ಚು ಆಗಬಹುದು ಎಂದು ಅಲ್ಲಿಯೇ ಕೆಳಗೆ ನೋಡಿದೆ . ಹತ್ತರಿಂದ ಒಂದು ಲಕ್ಷ ಅಂತ ಬರೆದಿತ್ತು .ಕೋಟಿ ಖರ್ಚು ಆಗಲಿ ಬಿಡುವುದಿಲ್ಲಾ ಎಂದು ಪರ್ಸ್ ಗೆ ಕೈ ಹಾಕಿದೆ . ಹತ್ತು ರುಪಾಯಿ ಐವತ್ತು ಪೈಸೆ ಇತ್ತು . ಛೇ !ದುಡ್ಡು ಜೋಡಿಸ ಬೇಕು ಎಂದು ಪರ್ಸ್ ಮಡಿಚಿ ಇಟ್ಟುಕೊಳ್ಳುವಾಗ ಮತ್ತೆರಡು ಕೂದಲು ಉದುರಿ ಹೆಗಲ ಮೇಲೆ ಬಿದ್ದಿದ್ದು ಕಾಣಿಸಿತು . ಹಾಗೆ ನಡೆದು ಕೊಂಡು ಹೋಗುತ್ತಿದ್ದವನು ಮತ್ತದೇ ಬಸ್ ನಿಲ್ದಾಣದಲ್ಲಿ ನಿಂತ ಅಂಕಲ್ ನೋಡಿದೆ . ಅವರು ನನ್ನನು ನೋಡಿ ಮತ್ತೆ ಮಂದಹಾಸ ಬೀರಿದರು .

                      ಮತ್ತಷ್ಟು ಜೋರಾಗಿ ನಡೆಯಲು ಆರಂಭಿಸಿದೆ . ಎಲ್ಲಿಗೆ ಎಂದು ನನಗೆ ಗೊತ್ತಿಲ್ಲಾ . ಬಹುಷಃ ಬರಿ ತಲೆ ತುಂಬಾ ಕೂದಲು ತುಂಬಿರುವ ಆ ಜಗತ್ತಿನೆಡೆಗೆ . ನಡೆಯುವಾಗೆಲ್ಲಾ ಒಂದೇ ಒಂದು ಪ್ರಶ್ನೆ ನನ್ನ ಸದಾ ಕಾಡ  ತೊಡಗಿತು . ಅದೇನೆಂದರೆ ಈ ಕೂದಲು ಬೇಡ ಬೇಡ ಅಂದರು ಬೇಡದ ಕಡೆ ಬೆಳದು ಬೇಕು ಬೇಕು ಎಂದರು ಬೇಕಾಗಿರುವ ಕಡೆ ಯಾಕೆ ಬೆಳೆಯುದಿಲ್ಲವಲ್ಲ ಯಾಕೆ ?




ಸೂಚನೆ : ಈ ಲೇಖನದಲ್ಲಿ ಯಾರ ಮನಸ್ಸಿಗೂ ನೋವುಂಟು ಮಾಡುವ ಉದ್ದೇಶ ನನಗಿಲ್ಲ . ನನ್ನ ತಲೆಯಲ್ಲಿನ ಕೂದಲು ಉದುರುತ್ತಿರುವ ಸಮಸ್ಯೆಗೆ ಹಾಗೆ ಹಾಸ್ಯ ಲೇಪಿಸಿ ಬರೆಯುತ್ತಿದೇನೆ . ಇದು  ಬರೀ  ಹಾಸ್ಯಕ್ಕೆ ಮಾತ್ರ . ಕೂದಲು ಇಲ್ಲದವರು ಓದಿ ದಯವಿಟ್ಟು ಶಾಪ ಹಾಕದಿರಿ . ಈ ಲೇಖನ ಬರೆಯುವ ಹೊತ್ತಿಗೆ ಅದಾಗಲೇ  ನನ್ನ ಹತ್ತು ಕೂದಲು ಉದುರಿವೆ .






















Ondalla Erdalla Kannada Movie Review

ಚಿತ್ರದುದ್ದಕ್ಕೂ ೬ ಅಡಿ ಹೀರೋಗಳ ಗುಣಗಾನ , ಒಂದಿಷ್ಟು ಬಿ ಸೆಂಟರ್ ಆಡಿಯನ್ಸ್ ಗಮನದಲ್ಲಿ ಇಟ್ಟುಕೊಂಡು ನಾಯಕಿ ಹೊಕ್ಕಳು ತೋರಿಸುವ ಧೃಶ್ಯಗಳು ಇರುವ, ಇಲ್ಲವೇ ಈಗಗಾಲೇ ಕಥೆ...